ಕನ್ನಡಪ್ರಭವ ವಾರ್ತೆ ಪಾಂಡವಪುರ
ಪಟ್ಟಣದ ಆದಿಚುಂಚನಗಿರಿ ಟ್ರಸ್ಟ್‌ನ ಬಿಜಿಎಸ್ ಶಾಲೆಯಲ್ಲಿ ಬಾಲಗಂಗಾಧರನಾಥ ಶ್ರೀಗಳ 82ನೇ ಜಯಂತ್ಯುತ್ಸವ ಹಾಗೂ 13ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಜ್ಞಾನಸಿರಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮನುಷ್ಯ ಸಂಬಂಧಗಳನ್ನು ಆದಷ್ಟು ಬೆಸೆಯಬೇಕಿದೆ. ಆದರೆ, ಮನುಷ್ಯನ ಭಾವನಾತ್ಮಕ ಸಂಬಂಧಗಳನ್ನು ಮೊಬೈಲ್‌ಗಳು ಕಿತ್ತುಕೊಳ್ಳುತ್ತಿವೆ. ಮಕ್ಕಳು ಪುಸ್ತಕ ಓದದೇ ಮೊಬೈಲ್ ಹಿಡಿದು ಓದುವ ಸಂಸ್ಕ್ರತಿಯಿಂದ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಬಾಲಗಂಗಾಧರನಾಥ ಶ್ರೀಗಳ ದೂರದೃಷ್ಟಿಯಿಂದ ಇಂದು ಬಿಜಿಎಸ್ ಶಿಕ್ಷಣ ಸಂಸ್ಥೆ ದೇಶ-ವಿದೇಶಗಳಲ್ಲಿ ಎತ್ತರವಾಗಿ ಬೆಳೆದಿದೆ. ಕನ್ನಡ ನಾಡು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯ ಸ್ವಾಭಿಮಾನದ ನಾಡು. ಇಲ್ಲಿ ಜಾತ್ಯತೀತತೆ ಮೆರೆದಿದೆ. ಮಕ್ಕಳನ್ನು ಯಂತ್ರ ಮಾನವನ್ನಾಗಿ ಮಾಡದೆ ಕುವೆಂಪು ಅವರ ಮಂತ್ರ ಮಾನವನ್ನಾಗಿ ಮಾಡಿ ವಿಶ್ವ ಮಾನವ ಸಂದೇಶಗಳನ್ನು ಮಕ್ಕಳಿಗೆ ಕಲಿಸಿಕೊಡಿ ಎಂದು ಕಿವಿಮಾತು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬುದ್ಧಿಯಲ್ಲಿ ಪ್ರತಿಭಾವಂತರಾದ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಅವರು ಸಮಾಜದಲ್ಲಿ ಸಾಧನೆ ಮಾಡುತ್ತಾರೆ. ಮಕ್ಕಳಲ್ಲಿ ಎಲ್ಲ ರೀತಿಯ ಅಗಾಧ ಬುದ್ಧಿವಂತಿಕೆ ಇದೆ. ಅದನ್ನು ಗುರುತಿಸಿ ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳ ಆಸಕ್ತಿಕ್ಕನುಗುಣವಾಗಿ ಕಲಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ಯಾವುದೇ ಒತ್ತಡ ಹೇರಬಾರದು ಎಂದರು.ಸಮಾರಂಭದಲ್ಲಿ ಶಿರಹಟ್ಟಿಯ ಭಾವೈಕ್ಯತಾ ಮಹಾಪೀಠದ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಿಮಿಕ್ರಿ ಕಲಾವಿದ ಜೂನಿಯರ್ ಅಂಬರೀಶ್ ತಮ್ಮ ಕಲಾ ಪ್ರತಿಭೆ ಮೂಲಕ ಸಭಿಕರನ್ನು ರಂಜಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ, ಚಲನಚಿತ್ರ ನಟರಾದ ಭವ್ಯ, ಶರಣ್, ಚಲನಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ್, ಪ್ರಾಂಶುಪಾಲ ರಘುಕುಮಾರ್ ಇತರರಿದ್ದರು.