ಸಾಧಕರ ಗ್ರಂಥಗಳು ಮುಂದಿನ ಪೀಳಿಗೆಗೆ ದಾರಿದೀಪ: ಡಾ.ಕೆ.ಪಿ.ಪುತ್ತೂರಾಯ

KannadaprabhaNewsNetwork |  
Published : Jan 21, 2026, 01:45 AM IST
ಪೊಟೊ: 20ಎಸ್‌ಎಂಜಿಕೆಪಿ10ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಡಾ.ಪಿ.ನಾರಾಯಣ್ ಅಭಿನಂದನಾ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು 'ಯೋಜಕ' ಅಭಿನಂದನಾ ಗ್ರಂಥ ಹಾಗೂ 'ಸಂತೃಪ್ತ ಸಾಧಕ' ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಸಾಧಕ ವ್ಯಕ್ತಿಯ ಸಾರ್ಥಕ ಚಿತ್ರಣವಿರುವ ಅಭಿನಂದನಾ ಗ್ರಂಥಗಳು ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಲಿದೆ ಎಂದು ಖ್ಯಾತ ವಾಗ್ಮಿ ಡಾ.ಕೆ.ಪಿ.ಪುತ್ತೂರಾಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಧಕ ವ್ಯಕ್ತಿಯ ಸಾರ್ಥಕ ಚಿತ್ರಣವಿರುವ ಅಭಿನಂದನಾ ಗ್ರಂಥಗಳು ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಲಿದೆ ಎಂದು ಖ್ಯಾತ ವಾಗ್ಮಿ ಡಾ.ಕೆ.ಪಿ.ಪುತ್ತೂರಾಯ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಡಾ.ಪಿ.ನಾರಾಯಣ್ ಅಭಿನಂದನಾ ಸಮಿತಿ ವತಿಯಿಂದ ಮಂಗಳವಾರ ಸಂಜೆ ''ಯೋಜಕ'' ಅಭಿನಂದನಾ ಗ್ರಂಥ ಹಾಗೂ ''ಸಂತೃಪ್ತ ಸಾಧಕ'' ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಮನುಷ್ಯನ ಭವಿಷ್ಯ ಹಣೆ ಬರಹದ ಮೇಲಲ್ಲ, ಹಣೆ ಬೆವರಿನ ಆಧಾರದ ಮೇಲೆ‌ ಅವಲಂಬಿತವಾಗಿದೆ. ಸಾಧಕರನ್ನು ಗುರುತಿಸುವುದು ಒಂದು ಸತ್ಕಾರ್ಯವಾಗಿದೆ.‌ ಅದು ಅನೇಕ‌ ಮನಸ್ಸುಗಳಿಗೆ ಪ್ರೇರಣೆ ನೀಡಲಿದೆ ಎಂದರು.

ಲವಲವಿಕೆ ಕೊನೆಯಾದಾಗ ಮಾತ್ರ ಮುಪ್ಪು ಎಂಬುದು ನಮ್ಮಲ್ಲಿ ಗ್ರಹಿಸುತ್ತದೆ. ಶರೀರದ ಬೊಜ್ಜಿಗಿಂತ, ಮಾನಸಿಕ ಬೊಜ್ಜು ನಮ್ಮನ್ನು ಕಾಡಬಾರದು.‌ ನಾರಾಯಣ್ ರವರು ಒಂದು ಅದ್ಭುತ ಶಕ್ತಿಯಾಗಿ ಸಮಾಜದಲ್ಲಿ ಬೆಳಗಿದ್ದಾರೆ. ಎಲ್ಲರನ್ನೂ ತಮ್ಮೆಡೆಗೆ ಸೆಳೆಯುವ ಸಕಾರಾತ್ಮಕ ವ್ಯಕ್ತಿತ್ವ ಅವರದ್ದಾಗಿದೆ ಎಂದು ಹೇಳಿದರು.

ಎಲ್ಲಾ ಸಂಸ್ಕೃತಿಯನ್ನು ಪ್ರೀತಿಸಿ, ಆದರೆ ನಿಮ್ಮ ಸಂಸ್ಕೃತಿಯಲ್ಲಿ ಜೀವಿಸಿ. ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ನಮ್ಮ ಭಾರತ ಹೊಂದಿದೆ. ಮಕ್ಕಳಿಗೆ ಕಷ್ಟ ಸುಖದ ಪರಿಚಯ‌ವನ್ನು ಪೋಷಕರು ಮಾಡಿಕೊಡಬೇಕು ಎಂದು ತಿಳಿಸಿದರು.

ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ನಾರಾಯಣ್ ಸೃಜನಶೀಲತೆಯ ಅಪ್ರತಿಮ‌ ಯೋಜಕ. 1966ರಲ್ಲಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದ ನಾರಾಯಣ್ ರವರು ಶಿವಮೊಗ್ಗದಲ್ಲಿ ಪ್ರಥಮ ನರ್ಸಿಂಗ್ ಹೋಂ ಪ್ರಾರಂಭಿಸಿದ ಕೀರ್ತಿ ಹೊಂದಿದ್ದಾರೆ. ಐಎಂಎ ಮೂಲಕ ನೂರಾರು ಆರೋಗ್ಯ ಸಂಬಂಧ ಕಾರ್ಯಯೋಜನೆಗಳನ್ನು ರೂಪಿಸಿ ಸಂಘಟಿಸಿದ್ದಾರೆ ಎಂದರು.

ನಾರಾಯಣ್ ನೇತೃತ್ವದ ಪ್ರತಿಯೊಂದು ಕಾರ್ಯಕ್ರಮವು ಯಶಸ್ಸಿನ ಪಥ ಸೇರಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.‌ ರೋಟರಿ ಮೂಲಕ ನೂರಾರು ಗ್ರಾಮೀಣ ಶಾಲೆಗಳನ್ನು ಉನ್ನತಿಕರಣಗೊಳಿಸಿದ ಕೀರ್ತಿ ಪಡೆದಿದ್ದಾರೆ. ಭಾರತವನ್ನು ಪೋಲಿಯೊ ಮುಕ್ತಗೊಳಿಸುವ ಕಾರ್ಯದಲ್ಲಿ ಅಪ್ರತಿಮ ಯೋಧರಂತೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಈ ಜಗತ್ತಿಗೆ ಬಂದ ಮೇಲೆ ಹೇಗೋ ಬದುಕಿದರಾಯಿತು ಎನ್ನುವ ಭಾವಕ್ಕಿಂತ ಹೀಗೆ ಬದುಕಬೇಕು ಎನ್ನುವ ಆತ್ಮಸ್ಥೈರ್ಯದ ಪ್ರತೀಕ ನಾರಾಯಣ್ ರವರು‌‌ ಎಂದು ಹೇಳಿದರು.

ಅಭಿನಂದನಾ ಸಮಿತಿಯ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೈದ್ಯ ಡಾ.ಪಿ.ನಾರಾಯಣ್ ಮಾತನಾಡಿದರು. ಇಂದಿರಾ ಮುರಳೀಧರ‌ ಪ್ರಾರ್ಥಿಸಿ, ವೈದ್ಯೆ ಡಾ.ಮೈಥಿಲಿ ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು.‌ ಉಪನ್ಯಾಸಕಿ ಪ್ರೊ.ಮಮತಾ ವಂದಿಸಿ, ಎನ್ಇಎಸ್ ಪಿ.ಆರ್.ಓ ಸಿ.ಎಂ.ನೃಪತುಂಗ ನಿರೂಪಿಸಿದರು.

ರೋಟರಿ ಪಲ್ಸ್ ಪೋಲಿಯೊ ಫಂಡ್‌ಗೆ ಅಭಿನಂದನಾ ಗ್ರಂಥದ ಹಣ

431 ಪುಟಗಳ ಯೋಜಕ‌ ಅಭಿನಂದನಾ ಗ್ರಂಥಕ್ಕೆ 500 ರುಪಾಯಿ ದರ ನಿಗದಿಪಡಿಸಲಾಗಿದ್ದು, ಮಾರಾಟದಿಂದ ಬಂದ ಹಣವನ್ನು ಅಂತಾರಾಷ್ಟ್ರೀಯ ರೋಟರಿ ಪಲ್ಸ್ ಪೋಲಿಯೊ ಫಂಡ್‌ಗೆ ಅರ್ಪಿಸಲಾಗುವುದು ಎಂದು ಗ್ರಂಥದ ಸಂಪಾದಕ ವೈದ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ