ಡಿ.ಸುಧಾಕರ್‌ಗೆ ತವರು ನೆಲದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

KannadaprabhaNewsNetwork |  
Published : May 25, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಳ್ಳಕೆರೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಚಿವ ಸುಧಾಕರ್ ಅವರ ಪರೋಕ್ಷ ಕಟ್ಟಳೆ ಶಾಂತಿ ಪೂಜೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅಗಲಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ತವರು ನೆಲ ಚಳ್ಳಕೆರೆಯಲ್ಲಿ ಭಾನುವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಸುಧಾಕರ್ ಅವರ ಅಭಿಮಾನಿಗಳು, ಅನುಯಾಯಿಗಳು ಪಾಲ್ಗೊಂಡು ಪರಸ್ಪರ ನೆನಪಿನ ಬುತ್ತಿಗಳ ಹರವಿದರು.

ಈ ಸಂಬಂಧ ಏರ್ಪಡಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜೈನಮುನಿ ಲಕ್ಷ್ಮಿಸೇನಾ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ, ಸಮಾಜದಲ್ಲಿ ನಾವು ಮಾಡುವ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಸುಧಾಕರ್ ಅವರ ಸಾತ್ವಿಕ ಗುಣಗಳು ಸಮಾಜದಲ್ಲಿ ಸಾಕಷ್ಟು ಜನರನ್ನು ಪ್ರೇರಣೆಗೊಳಿಸಿದ್ದವು. ಅವರ ನಡೆ ಜನತೆಯನ್ನು ಸಮಸ್ಯೆಗಳಿಂದ ದೂರ ಮಾಡುವುದೇ ಆಗಿತ್ತು. ಅವರ ನಿಧನ ಇಡೀ ಸಮಾಜಕ್ಕೆ ಆದ ಬಹುದೊಡ್ಡ ನಷ್ಟ ಎಂದು ನುಡಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ಮತ್ತು ಹಿರಿಯೂರು ಕ್ಷೇತ್ರಗಳಿಗೆ ಎರಡು ಕಣ್ಣುಗಳ ರೀತಿಯಲ್ಲಿ ಅಭಿಮಾನಿಗಳಿಗೆ ಬಾಜನರಾಗಿದ್ದ ಸುಧಾಕರ್ ಜೀವಂತವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರ ಜನಪರ ಕಾರ್ಯಗಳು ನಮ್ಮೊಂದಿಗೆ ಸದಾ ಇರಲಿವೆ. ಸರ್ಕಾರಿ ಉದ್ಯೋಗ ಬಿಟ್ಟು ಸಮಾಜ ಸೇವೆ ಮಾಡಲು ರಾಜಕಾರಣಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತವರು ಸುಧಾಕರ್ ಎಂದು ನೆನೆದರು.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸುಧಾಕರ್ ಅವರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಲ್ಲಿಸಿರುವ ಸೇವೆ ಅಗಾಧವಾದುದು. ಅವರ ಬಳಿ ವಿದ್ಯಾಭ್ಯಾಸ ಸೇರಿದಂತೆ ಅನೇಕ ಸಮಸ್ಯೆಗಳ ಹೇಳಿಕೊಂಡು ಹೋಗುವವರ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡದಿತ್ತು. ಯಾರನ್ನೂ ವಾಪಾಸ್ ಬರಿಗೈಲಿ ಕಳುಹಿಸಿದವರಲ್ಲ. ವೈಯಕ್ತಿಕವಾಗಿ ನನಗೆ ತುಂಬಾ ಧೈರ್ಯ ಮತ್ತು ಸಲಹೆಗಳನ್ನು ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.

ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ನಮ್ಮ ಜಿಲ್ಲೆಯ ಜನಪ್ರಿಯ ರಾಜಕೀಯ ವ್ಯಕ್ತಿಯಾಗಿದ್ದ ಸುಧಾಕರ್ ಸಾವು ನಮ್ಮನ್ನು ಸದಾ ಕಾಡಲಿದೆ. ಅವರೊಂದಿಗೆ ಕಳೆದ ಕ್ಷಣಗಳು ನೆನಪಿಸಿಕೊಂಡರೆ ಮನಸ್ಸು ಭಾರವಾಗುತ್ತದೆ. ಅವರ ಲವಲವಿಕೆ, ಉತ್ಸಾಹ ಇನ್ನೂ ಅನೇಕ ವರ್ಷಗಳ ಕಾಲ ಅವರ ಸೇವೆಯ ಅಗತ್ಯ ಈ ಜಿಲ್ಲೆಗಿತ್ತು. ಆದರೆ, ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಅತ್ಯಂತ ನೋವಿನ ಸಂಗತಿ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಮಾತನಾಡಿ, ಸುಧಾಕರ್ ಕಾರ್ಯಕರ್ತರನ್ನು ಸದಾ ಹೆಸರಿಡಿದೇ ಕರೆಯುತ್ತಿದ್ದರು. ಯಾವ ಊರಿಗೆ ಹೋದರೂ ಅವರ ನೆನಪಿನ ಶಕ್ತಿ ಕೆಲಸ ಮಾಡುತ್ತಿತ್ತು. ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಮನುಷ್ಯ ದಿಡೀರ್ ಸಾವನ್ನಪ್ಪಿದ್ದು ಆಘಾತ ತಂದಿದೆ. ಈ ರಾಜ್ಯಕ್ಕೆ, ಜಿಲ್ಲೆಗೆ ಅವರ ನಿಧನ ದೊಡ್ಡ ನಷ್ಟವನ್ನುಂಟುಮಾಡಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಈ ಜಿಲ್ಲೆಯಲ್ಲಿ ಸುಧಾಕರ್ ಜಿಲ್ಲಾಮಂತ್ರಿಯಾಗಿದ್ದ ಸಮಯದಲ್ಲಿ ಇಲ್ಲಿಗೆ ಕರ್ತವ್ಯಕ್ಕೆ ಬಂದ ನನಗೆ ಎಂದಿಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವ ವಿಷಯಕ್ಕೂ ಪ್ರಭಾವ ಬೀರಿದವರಲ್ಲ. ಅಂತಹವರ ಜೊತೆ ಕೆಲಸ ಮಾಡಿದ್ದು ನಮ್ಮ ಸೌಭಾಗ್ಯ ಎಂದು ಹೇಳಿದರು.

ಮಾಜಿ ಸಚಿವ ಎಚ್. ಆಂಜನೇಯ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಕೆಳೆಗೋಟೆ ಇದ್ದರು. ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ರಾಮಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸುಧಾಕರ್ ಸಹೋದರರು, ಕುಟುಂಬವರ್ಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ರೂಪಿಸಿಲ್ಲ
ಅಭಿವೃದ್ಧಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು