ಮುಸಲ್ಮಾನರ ಸರ್ವತೋಮುಖ ಅಭಿವೃದ್ಧಿಗೆ ಒತ್ತು

KannadaprabhaNewsNetwork | Published : Apr 1, 2025 12:50 AM

ಸಾರಾಂಶ

ಸರ್ವ ಸಮುದಾಯಗಳ ಜತೆಗೆ ದೇಶದ ಅಭಿವೃದ್ಧಿಯೆ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್ ಎಂದರೆ ಎಲ್ಲಾ ಜನಾಂಗದವರ ಅಭಿವೃದ್ದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಎಲ್ಲ ಸಮುದಾಯದವರನ್ನು ಒಂದಾಗಿ ಕಾಣುವಂತೆ, ನಾವು ಕೂಡ ಎಲ್ಲ ಸಮುದಾಯದವರನ್ನು ಜತೆಗೂಡಿಸಿಕೊಂಡು ಒಂದಾಗಿ ಬಾಳಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ರೇಣುಮಾಕಲಹಳ್ಳಿಯಲ್ಲಿ ಮುಸ್ಲಿಂ ಭಾಂಧವರಿಗೆ ರಂಜಾನ್ ಹಬ್ಬದ ಕೊಡುಗೆಯಾಗಿ ಗ್ರಾಮದಿಂದ ಈದ್ಗಾ ಮೈದಾನದವರೆಗಿನ 30 ಲಕ್ಷ ರೂಗಳ ವೆಚ್ಚದ ಕಾಂಕ್ರೀಟ್ ರಸ್ತೆಗೆ ಸೋಮವಾರ ಶಂಕು ಸ್ಥಾಪನೆ ನೆರೆವೇರಿಸಿ, ಗ್ರಾಮಸ್ಥರೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕನಾಗಿ ಎರಡು ವರ್ಷ ಕಳೆದಿದ್ದು, ಕ್ಷೇತ್ರದ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ, ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಈದ್ಗಾ ರಸ್ತೆ ಕಾಮಗಾರಿಗೆ ಶಂಕು

ಕಳೆದ ಬಾರಿ ರೇಣುಮಾಕಲಹಳ್ಳಿಗೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಬಂದಾಗ ಇಲ್ಲಿನ ಮುಸ್ಲಿಂ ಬಾಂಧವರು ಗ್ರಾಮದಿಂದ ಈದ್ಗಾವರೆಗೂ ಇರುವ ರಸ್ತೆ ಹಾಳಾಗಿದ್ದು, ಅದನ್ನು ಸರಿ ಪಡಿಸಿ ಕೊಡುವಂತೆ ಕೇಳಿದ್ದರು. ಇಂದು ಅವರ ಪವಿತ್ರಹಬ್ಬವಾದ ರಂಜಾನ್‌ನಂದು 30 ಲಕ್ಷ ರೂಗಳ ಕಾಂಕ್ರೀಟ್ ರಸ್ತೆಗೆ ಶಂಕುಸ್ಥಾಪನೆಯನ್ನು ಮಾಡಿದ್ದೇನೆ. ಈ ಶಂಕುಸ್ಥಾಪನೆಯನ್ನು ನಮ್ಮ ಹಿಂದು ಪದ್ದತಿಯಂತೆ ಪೂಜೆ ಮತ್ತು ಮುಸಲ್ಮಾನರಂತೆ ದುವ್ವಾ (ಪೂಜೆ) ಯನ್ನು ಮಾಡಿ ಹಿಂದೂ ಮುಸಲಿಂ ಭಾವೈಕ್ಯತೆಗೆ ನಾಂದಿ ಹಾಡಿದ್ದೇವೆಂದರು.

ಸರ್ವ ಸಮುದಾಯಗಳ ಜತೆಗೆ ದೇಶದ ಅಭಿವೃದ್ಧಿಯೆ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್ ಎಂದರೆ ಎಲ್ಲಾ ಜನಾಂಗದವರ ಅಭಿವೃದ್ದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಎಲ್ಲ ಸಮುದಾಯದವರನ್ನು ಒಂದಾಗಿ ಕಾಣುವಂತೆ, ನಾವು ಕೂಡ ಎಲ್ಲ ಸಮುದಾಯದವರನ್ನು ಜತೆಗೂಡಿಸಿಕೊಂಡು ಒಂದಾಗಿ ಬಾಳಬೇಕಾಗಿದೆ. ಈಮೂಲಕ ಮುಂದಿನ ಪೀಳಿಗೆಗೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಬೇಕು. ಸಹಬಾಳ್ವೆಯಿಂದ ಜೀವನ ಸಾಗಿಸಿ ಸುಂದರವಾದ ಸಮಾಜ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಎಲ್ಲರಲ್ಲೂ ವಿಶ್ವಾಸ ವೃದ್ಧಿಯಾಗಲಿ

ದೇಶವನ್ನು ಕಟ್ಟಲು ಅಭಿವೃದ್ಧಿಯತ್ತ ಸಾಗಿಸಲು ಎಲ್ಲ ಸಮು ದಾಯದವರ ಸಹಕಾರ ಅಗತ್ಯ. ವಿಭಿನ್ನ ಸಮುದಾಯಗಳ ಸಂಸ್ಕೃತಿಗಳೇ ಭಾರತದ ಜೀವಾಳ. ಈ ನಿಟ್ಟಿನಲ್ಲಿ ಕಾಂಗ್ರಸ್ ಎಲ್ಲರನ್ನು ಸಮಾನವಾಗಿ ಕಾಣುವ ನೀತಿ ಅನುಸರಿಸುತ್ತಿದೆ. ದೇಶ ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆ,ಬೆಳೆ ಆಗಬೇಕು.ವಿಶ್ವದಲ್ಲಿ ಶಾಂತಿ-ಸೌಹಾರ್ದತೆ ನೆಲೆ ನಿಲ್ಲಬೇಕು. ಈದ್‌ ಉಲ್ ಫಿತರ್‌ ಆಚರಣೆಯಿಂದ ಸಮಾಜದಲ್ಲಿ ಸೌಹಾರ್ದ, ಸಹನೆ,ಪರಸ್ಪರ ಪ್ರೀತಿ- ವಿಶ್ವಾಸ ವೃದ್ಧಿಯಾಗಬೇಕು.ಉಳ್ಳವರು ಬಡವರಿಗೆ ದಾನ,ಧರ್ಮ ಮಾಡಬೇಕು. ಸಮಸ್ತ ಮುಸಲ್ಮಾನ ಬಾಂದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ವೇಳೆ ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮುನೇಗೌಡ, ಮುಖಂಡರಾದ ಕಮ್ಮಗುಟ್ಟಹಳ್ಳಿ ವೆಂಕಟೇಶ್, ಉಪ್ಪು ಕುಂಟ ವೆಂಕಟೇಶ್, ಮೆಹಬೂಬು,ಜಮೀರ್,ಕುಪೇಂದ್ರ, ಅರವಿಂದ್, ಮೋಹನ್ ರೆಡ್ಡಿ, ಎಸ್.ಪಿ.ಶ್ರೀನಿವಾಸ್,ಮಧು, ರಾಜಣ್ಣ, ಜಿ.ಉಮೇಶ್, ಶಂಕರ, ಮತ್ತಿತರರು ಇದ್ದರು.

Share this article