ಬ್ಯಾಡಗಿ: ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಕೆರೆ ತುಂಬಿಸಲು ಎಂಜಿನಿಯರ್‌ಗೆ ಸೂಚನೆ: ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಮಳೆ ಬಿದ್ದ ಪರಿಣಾಮ ತುಂಗಭದ್ರಾ ಹಾಗೂ ವರದಾ ನದಿಗಳಿಂದ ನೀರು ತುಂಬಿಸಲಾಗಿದೆ. ಹೀಗಾಗಿ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿದೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಪೈಪ್‌ಲೈನ್ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಒಂದೇ ಹಂತದಲ್ಲಿ ಟೆಂಡರ್ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸಚಿವರಿಂದ ಚಾಲನೆ ನೀಡಲಾಗುವುದು ಎಂದರು.
ಕೊಟ್ಟ ಭರವಸೆಯಂತೆ ಪೈಪ್‌ಲೈನ್: ತಾಲೂಕಿನ ಮಲೆನಾಡು ಭಾಗದ 13 ಸಾವಿರ ಹೆಕ್ಟೇರು ಕೃಷಿಭೂಮಿಗೆ ನೀರುಣಿಸುವ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಹಾನಗಲ್ಲ ತಾಲೂಕು ಬ್ಯಾತನಾಳ ಬಳಿ ಜಾಕ್‌ವೆಲ್ ಅಳವಡಿಸಿದ್ದು, ಕಾಲುವೆ ಮೂಲಕ ನೀರು ಹರಿದು ಬರುತ್ತಿದೆ. ಸಮರ್ಪಕವಾಗಿ ರೈತರ ಎಲ್ಲ ಜಮೀನುಗಳಿಗೆ ನೀರು ಲಭ್ಯವಾಗುತ್ತಿಲ್ಲ. ಚುನಾವಣೆ ಮುನ್ನ ಕೊಟ್ಟ ಭರವಸೆಯಂತೆ ಕಾಲುವೆಗಳಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸಲು ಡಿಪಿಆರ್ ಸಿದ್ಧಗೊಳಿಸಿ ಮುಖ್ಯಮಂತ್ರಿ ಸಚಿವ ಸಂಪುಟದಲ್ಲಿ ₹115 ಕೋಟಿ ಮಂಜೂರಾತಿ ನೀಡಿದ್ದಾರೆ ಎಂದರು.ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಕೆರೆಗಳು ನೀರು ಭರ್ತಿಯಾಗಲಿವೆ. ಮುಂಗಾರು ಶುರುವಾದ ಬಳಿಕ ಹೊಳೆಗಳಿಂದ ಕಡ್ಡಾಯವಾಗಿ ಎಲ್ಲ ಕೆರೆಗಳಿಗೆ ಈಗಿನ ಕಾಲುವೆ, ಪೈಪ್‌ಲೈನ್ ಮೂಲಕ ನೀರು ಹರಿಸಬೇಕು ಎಂದು ನಿರ್ವಹಣೆ ಪ್ರಾಧಿಕಾರದ ಎಂಜಿನಿಯರ್‌ಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ವೇಳೆ ಪಂಚ ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ್ರ ಪಾಟೀಲ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ನಾಗನಗೌಡ್ರ ಪಾಟೀಲ, ರಮೇಶ ಸುತ್ತಕೋಟಿ, ವೀರನಗೌಡ ಶಿವನಗೌಡ್ರ, ಮಾರುತಿ ಅಚ್ಚೀಗೇರಿ, ಮಲ್ಲಪ್ಪ ದೇಸಾಯಿ, ಲೋಕೋಪಯೋಗಿ ಎಂಜಿನಿಯರ್ ಆಂಜನೇಯ, ಅಶೋಕ ಪಾಟೀಲ, ಕೆ.ಎಲ್. ಹರೀಶ ಬೀರಪ್ಪ ಕತ್ತಿ ಇತರರಿದ್ದರು.