₹೨೦ ಲಕ್ಷ ವೆಚ್ಚದಲ್ಲಿ ರಾಮಸಮುದ್ರ- ಬ್ಯಾಡಮೂಡ್ಲು- ಕೋಡಿಮೋಳೆ ಮಾರ್ಗ ರಸ್ತೆಗೆ ಚಾಲನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ದೊಡ್ಡಕೆರೆ, ಚಿಕ್ಕಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ರೈತರ ಜಮೀನುಗಳು ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.ತಾಲೂಕಿನ ರಾಮಸಮುದ್ರದಿಂದ ಬ್ಯಾಡಮೂಡ್ಲು, ಕರಿನಂಜನಪುರದಿಂದ -ಕೋಡಿಮೋಳೆ-ಬಸವನಪುರ ಗ್ರಾಮಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ ಕಾಡಾದಿಂದ ಬಿಡುಗೆಯಾಗಿರುವ ೨೦ ಲಕ್ಷ ರು. ವೆಚ್ಚದಲ್ಲಿ ಕಚ್ಚಾ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಈ ರಸ್ತೆಗಳು ಶಿಥಿಲಗೊಂಡಿದ್ದು, ಜಂಗಲ್ ಬೆಳೆದು ರೈತರು ತಿರುಗಾಡುವುದು ಕಷ್ಟವಾಗಿತ್ತು. ಹಳ್ಳ ಕೊಳ್ಳಗಳಿಂದ ಕೂಡಿದ್ದು, ಮಳೆ ಬಂದರೆ ತಮ್ಮ ಕೃಷಿ ಜಮೀನುಗಳಿಗೆ ಹೋಗಲು ಪ್ರಯಾಸ ಪಡುತ್ತಿದ್ದರು. ಇದನ್ನು ಮನಗಂಡು ಬ್ಯಾಡಮೂಡ್ಲುನಿಂದ ದೊಡ್ಡಕೆರೆಗೆ ಸಂಪರ್ಕ ಕಲ್ಪಿಸುವ ೨.೨ ಕಿ.ಮೀ. ರಸ್ತೆ ಹಾಗೂ ಬ್ಯಾಡಮೂಡ್ಲುನಿಂದ ಬಸವನಪುರಕ್ಕೆ ಸಂಪರ್ಕ ಕಲ್ಪಿಸುವ ೫೦೦ ಮೀಟರ್ ರಸ್ತೆಯನ್ನು ಈ ಅನುದಾನದಲ್ಲಿ ಅಭಿವೃದ್ದಿಪಡಿಸಲಾಗುತ್ತದೆ ಎಂದು ಹೇಳಿದರು.ರೈತರು ಗುತ್ತಿಗೆದಾರರಿಗೆ ಸಹಕಾರ ನೀಡಿ, ತಮ್ಮ ಜಮೀನಿನ ಬದಿಯಲ್ಲಿ ಬೆಳೆದಿರುವ ಜಂಗಲ್ ಕಟಿಂಗ್ ಹಾಗೂ ರಸ್ತೆ ನಿರ್ಮಾಣ ಮಾಡುವಾಗ ಸಹಕಾರ ನೀಡಬೇಕು. ಗ್ರಾವೆಲ್ ಹಾಗೂ ಜೆಲ್ಲಿ ಹಾಕುವ ಸಂದರ್ಭದಲ್ಲಿ ಖುದ್ದು ಇದ್ದು, ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶದ ರಸ್ತೆಗಳು ಸೇರುವ ನಾಲೆ, ಬದು ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಸರ್ಕಾರಕ್ಕೆ ಕ್ರಿಯಾಯೋಜನೆಯನ್ನು ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮೋದನೆ ಪಡೆದುಕೊಂಡು ಕಾಡಾ ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಸಮಾನಂತರವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ. ರೈತರು ಸಹಕಾರ ನೀಡಬೇಕು. ಅಲ್ಲದೇ ಸುವರ್ಣವತಿ ಚಿಕ್ಕಹೊಳೆ ವ್ಯಾಪ್ತಿಯ ಅಚ್ಚುಕಟ್ಟು ರೈತರು ಸಹ ಕಾಡಾ ಯೋಜನೆಗಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಆರ್.ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ನಗರಸಭಾ ಮಾಜಿ ಸದಸ್ಯ ಬಸವರಾಜು, ಶಿವಮೂರ್ತಿ, ಪ್ರಸನ್ನಕುಮಾರ್, ರಾಮಸಮುದ್ರ ಬಾಬು, ಅಕ್ಷಯ್, ಬಸನಪುರ ಮಹೇಶ್, ವೀರಭದ್ರಸ್ವಾಮಿ, ಬಿ.ಎಂ. ಮಹದೇವಸ್ವಾಮಿ, ಜಿ. ನಾಗರಾಜು, ಶಿವಶಂಕರ್, ಕರಿನಂಜನಪುರ ಮಹೇಶ್, ಗುರುಸ್ವಾಮಿ, ಕಾಡಾ ಎಇಇ ಗಣೇಶ್, ಎಇ ನಿವೇದಿತಾ ಮೊದಲಾದವರು ಇದ್ದರು.