ಹಗರಿಬೊಮ್ಮನಹಳ್ಳಿ: ವೀರಶೈವ ಲಿಂಗಾಯಿತ ಸಮಾಜದ ಒಳ ಪಂಗಡಗಳ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳ ಬದಲಾವಣೆಯ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಅನುದಾನ ಒದಗಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.
ವೀರಶೈವ ಲಿಂಗಾಯಿತ ಸಮಾಜದ ಬಹುತೇಕ ಜನರು ಹೆಚ್ಚಾಗಿ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಭಾಗದ ಏತ ನೀರಾವರಿ ಸಹಿತ ಹಗರಿಬೊಮ್ಮನಹಳ್ಳಿ ಜಲಾಶಯದ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾರಿಗೆ ಸದನದಲ್ಲಿ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೊಟ್ಟೂರಿನಲ್ಲಿಯೂ ಈ ವರ್ಷಾಂತ್ಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತ ನಿರ್ಮಾಣಕ್ಕೆ ಹಾಗೂ ಚಪ್ಪರದಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದರು.ಪಟ್ಟಣದಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಬಸವೇಶ್ವರ ವೃತ್ತ ನಿರ್ಮಾಣ ಮಾಡಲಾಗಿದೆ. ಹಾಗೆಯೇ ತಲಾ ₹65 ಲಕ್ಷ ಅನುದಾನ ಒದಗಿಸಿ ಅಂಬೇಡ್ಕರ್, ಕನಕದಾಸ, ಜಗಜೀವನರಾಮ್ ಹಾಗೂ ವಾಲ್ಮೀಕಿ ವೃತ್ತಗಳ ನಿರ್ಮಾಣಕ್ಕೆ ಶ್ರಮಿಸಲಾಗಿದೆ. ಪ್ರತಿ ಸಮಾಜದ ಅಭಿವೃದ್ಧಿಗೆ ಅಗತ್ಯ ಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಹರದ ಮಾಜಿ ಶಾಸಕ ಎಚ್. ಶಿವಶಂಕರ್ ಮತ್ತು ಪಂಚಮಶಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ ಪಾಟೀಲ್ ಮಾತನಾಡಿದರು.