ಕೃಷಿ ಮೇಳದಲ್ಲಿ ಡಿಜಿಟಲ್‌ ಕೃಷಿಗೆ ಒತ್ತು

KannadaprabhaNewsNetwork | Published : Oct 6, 2024 1:20 AM

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಈ ಬಾರಿ ಆಯೋಜಿಸಲಿರುವ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಇದೇ ಮೊದಲ ಬಾರಿಗೆ ‘ಡಿಜಿಟಲ್‌ ಕೃಷಿ’ಗೆ ಒತ್ತು ನೀಡಲಾಗಿದೆ. ಆದ್ದರಿಂದಲೇ ಈ ಸಲ ‘ಹವಾಮಾನ ಚತುರ-ಡಿಜಿಟಲ್‌ ಕೃಷಿ’ ಘೋಷವಾಕ್ಯದಡಿ ಮೇಳ ಹಮ್ಮಿಕೊಳ್ಳಲಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಈ ಬಾರಿ ಆಯೋಜಿಸಲಿರುವ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಇದೇ ಮೊದಲ ಬಾರಿಗೆ ‘ಡಿಜಿಟಲ್‌ ಕೃಷಿ’ಗೆ ಒತ್ತು ನೀಡಲಾಗಿದೆ. ಆದ್ದರಿಂದಲೇ ಈ ಸಲ ‘ಹವಾಮಾನ ಚತುರ-ಡಿಜಿಟಲ್‌ ಕೃಷಿ’ ಘೋಷವಾಕ್ಯದಡಿ ಮೇಳ ಹಮ್ಮಿಕೊಳ್ಳಲಾಗಿದೆ.

ಹೆಬ್ಬಾಳದ ಜಿಕೆವಿಕೆಯಲ್ಲಿ ನ.14 ರಿಂದ 17 ರವರೆಗೂ ಕೃಷಿ ಮೇಳ ಆಯೋಜನೆಯಾಗಲಿದೆ, ಕೃಷಿಯಲ್ಲಿ ಡಿಜಿಟಲ್‌ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕವೇ ರೈತರಿಗೆ ಮಾಹಿತಿ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಾತ್ಯಕ್ಷಿಕೆ ನೀಡಲು ಅನುಕೂಲವಾಗಲೆಂದು ಕೃಷಿ ಮೇಳ ಮೈದಾನದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

ಬಹುಪಯೋಗಿ ಚಾಲಕರಹಿತ ಟ್ರ್ಯಾಕ್ಟರ್‌:

ಸೆಮಿ ಆಟೋಮ್ಯಾಟಿಕ್‌ ಟ್ರ್ಯಾಕ್ಟರ್‌ ಮೌಂಟೆಡ್‌ ಸ್ಪ್ರೇಯರ್‌ ಪ್ರದರ್ಶನವಿದ್ದು, ಚಾಲಕರಹಿತ ಟ್ರ್ಯಾಕ್ಟರ್‌ನಿಂದ ದ್ರವರೂಪದ ರಸಗಬ್ಬರ, ಕಳೆ ನಾಶಕ, ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಯಾವ ರೀತಿ ಸಿಂಪಡಿಸಬಹುದು ಎಂಬುದನ್ನು ಪ್ರದರ್ಶಿಸಲಾಗುವುದು. ಯಾವ್ಯಾವ ಬೆಳೆಗಳಿಗೆ ಎಷ್ಟು ಎತ್ತರದಲ್ಲಿ ಡ್ರೋನ್‌ ಮೂಲಕ ಔಷಧಿ ಸಿಂಪಡಿಸಬೇಕು? ಗಾಳಿಯ ವೇಗ ಹೆಚ್ಚಾಗಿದ್ದಾಗ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ಹಲವು ಮಾಹಿತಿಗಳನ್ನು ಒದಗಿಸಲಾಗುವುದು.

ಸುಮಾರು 750 ಮಳಿಗೆಗಳಿಗೆ ಅವಕಾಶವಿರಲಿದ್ದು, ಕೃಷಿ ವಲಯದ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಬೆಂಗಳೂರು ಕೃಷಿ ವಿವಿ ಮತ್ತು ಸಂಬಂಧಿತ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಉತ್ಪನ್ನಕ್ಕೆ ಅವಕಾಶ ನೀಡುವ ‘ಊರು-ಕೇರಿ’ಯ ಉತ್ಪನ್ನಗಳೂ ಲಭಿಸಲಿವೆ. ನರ್ಸರಿ, ವಿವಿಧ ತಳಿಯ ಕುರಿ, ಕೋಳಿ, ಜಾನುವಾರುಗಳನ್ನೂ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.

ಬಾಕ್ಸ್...

ಹೆಚ್ಚಿನ ರೈತರು ಭಾಗಿ:

ಸುರೇಶ ವಿಶ್ವಾಸ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ। ಎಸ್‌.ವಿ.ಸುರೇಶ ಕಳೆದ ಬಾರಿ 17 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಈ ಸಲ ಮಳೆ ಉತ್ತಮವಾಗಿದ್ದು, ಬಿತ್ತನೆಯೂ ಮುಗಿದಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಸಾಧ್ಯತೆ ಇದೆ ಎಂದರು.

Share this article