ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು

KannadaprabhaNewsNetwork | Published : Sep 12, 2024 1:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮುದಾಯ ಭವನ, ರಸ್ತೆ, ಸಾರಿಗೆ, ಚರಂಡಿ, ಸಿ.ಸಿ.ರಸ್ತೆ ಸೇರಿದಂತೆ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಜೊತೆಗೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮುದಾಯ ಭವನ, ರಸ್ತೆ, ಸಾರಿಗೆ, ಚರಂಡಿ, ಸಿ.ಸಿ.ರಸ್ತೆ ಸೇರಿದಂತೆ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಜೊತೆಗೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಸೋಮವಾರ ಜಿಲ್ಲಾ ಪಂಚಾಯತ್, ಪಂಚಾಯತ ರಾಜ್ ಎಂಜಿನಿಯರಿಂಗ್ ಉಪವಿಭಾಗ ಬಾಗೇವಾಡಿ, ದೇವರಹಿಪ್ಪರಗಿ ಸಾತಿಹಾಳ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ, ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆಯಡಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಶಾಲೆಯ ಕಟ್ಟಡದ ಕೊರತೆ ನೀಗಿಸುವ ಭಾಗ್ಯ ಇದೀಗ ಬಂದಿದೆ. ಗ್ರಾಮದ ಜನತೆಯ ಕನಸು ನನಸಾದಂತಾಗಿದೆ ಹಾಗೂ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ಆ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲೀಕರಣವಾಗಬೇಕಾಗಿದೆ. ಸಮುದಾಯದ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾತಿಹಾಳ ತಾಂಡಾ ಗ್ರಾಮದಲ್ಲಿ 2023-24ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು ₹ 5 ಲಕ್ಷ ವೆಚ್ಚದ ಶ್ರೀ ರಮಣಾದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕ್ಷೇತ್ರದ ದಿಂಡವಾರ ಗ್ರಾಮದಲ್ಲಿ ವಿವೇಕ್ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬರುವ ದಿನಗಳಲ್ಲಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಸಮುದಾಯ ಭವನ ಹಾಗೂ ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಗುಣಮಟ್ಟದ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.

ಗ್ರಾಪಂ ಅಧ್ಯಕ್ಷರ ಪ್ರತಿನಿಧಿಯಾದ ಹಣಮಂತ್ರಾಯ ಬಿರಾದಾರ ಮಾತನಾಡಿ, ಶಾಸಕರು ಈ ಭಾಗದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸುತ್ತಿರುವುದು ಅವರ ಇಚ್ಛಾಶಕ್ತಿ ತೋರಿಸುತ್ತದೆ. ಬರುವ ದಿನಗಳಲ್ಲಿ ಶಾಸಕರಿಗೆ ಸಹಕಾರ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣ ಎಂದು ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗೇಶ ಅವಟಿ, ಸುನೀಲ ಮಾಗಿ, ಅಯ್ಯಪ್ಪ ನಂದ್ಯಾಳ, ಕಾಸು ಸಾಸಟ್ಟಿ, ಗಂಗಾಧರ ಪಾಟೀಲ, ರಾಹುಲ ರೊಳ್ಳಿ, ಪ್ರಕಾಶ ಶಾಂತಗಿರಿ, ರಮೇಶ ರೊಳ್ಳಿ, ಶಿವು ಅವಟಿ, ಶಿವು ರೊಳ್ಳಿ ಸೇರಿದಂತೆ ಆಯಾ ಗ್ರಾಮದ ಪ್ರಮುಖರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.----------

Share this article