- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಗೆಲುವು ನಿಶ್ಚಿತ: ನಂಜುಂಡಸ್ವಾಮಿ, ಶಿವಣ್ಣ ವಿಶ್ವಾಸ - - -
ದಿವಂಗತ ಶಾಮನೂರು ಶಿವಶಂಕರಪ್ಪನವರ ನೆನಪನ್ನು ಶಾಶ್ವತವಾಗಿ ಉಳಿಯಬೇಕಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರುಗೆ ದಕ್ಷಿಣ ಕ್ಷೇತ್ರದಿಂದ ಜಯ ಸಾಧಿಸುವ ಮೂಲಕ ಜನರ ನಿರೀಕ್ಷೆಗೆ ತಕ್ಕಂತಹ ಸಮಾಜ ಸೇವಕನಾಗಲಿದ್ದಾನೆ ಎಂದು ಕೊಳ್ಳೆಗಾಲದ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ನಂಜುಂಡ ಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಕುಟುಂಬಕ್ಕೆ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥಗೆ ಪಕ್ಷ ಅವಕಾಶ ನೀಡಿದೆ. ತನ್ನ ತಾತನ ಅಭಿಲಾಷೆಯಂತೆ ಜನಸೇವೆ, ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಸಮರ್ಥ ಶಾಮನೂರು ಉತ್ತಮ ಶಾಸಕನಾಗಲಿದ್ದಾನೆ ಎಂದರು.ದಕ್ಷಿಣ ಕ್ಷೇತ್ರದಲ್ಲಿ ಅನಿರೀಕ್ಷಿತ ಉಪ ಚುನಾವಣೆ ಇದಾಗಿದೆ. ದಾವಣಗೆರೆಯ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಪ್ರಗತಿಗೆ ಶಾಮನೂರು ಕೊಡುಗೆ ಇದೆ. ಶಾಮನೂರು ಶಿವಶಂಕರಪ್ಪನವರ ಹಾದಿಯಲ್ಲಿ ಸಾಗಬೇಕೆಂಬ ಸೂಚನೆಯೊಂದಿಗೆ ಪಕ್ಷವು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಿದೆ. 3 ದಶಕದಿಂದಲೂ ಶಾಮನೂರು ಕುಟುಂಬದೊಂದಿಗೆ ತಮ್ಮ ಒಡನಾಟವಿದ್ದು, ತಮ್ಮ ಭಾಗದ ಅನೇಕ ದೇವಸ್ಥಾನ, ಪುಣ್ಯಕ್ಷೇತ್ರಗಳಿಗೆ ಶಾಮನೂರು ಶಿವಶಂಕರಪ್ಪ ಉದಾರ ದೇಣಿಗೆ ನೀಡಿ, ಧಾರ್ಮಿಕ ಕ್ಷೇತ್ರಗಳಿಗೆ ಸಾಮಾಜಿಕ ಶಕ್ತಿ ತುಂಬಿದವರು ಎಂದು ಸ್ಮರಿಸಿದರು.
ಮೀಸಲಾತಿ ವಿಚಾರದಲ್ಲಿ ಎಡ-ಬಲ ಅಂತೆಲ್ಲಾ ಗೊಂದಲ ನಿರ್ಮಾಣವಾಗಿದೆ. ಸದ್ಯ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಯಾವುದನ್ನೂ ನೇರವಾಗಿ ಘೋಷಣೆ ಮಾಡುವಂತಿಲ್ಲ. ಮಾ.27ಕ್ಕೆ ಸಂಪುಟ ಸಭೆ ಕರೆದು, ಮೀಸಲಾತಿ ವಿಚಾರದ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ, ಸರ್ಕಾರವು ನೀತಿ ಸಂಹಿತೆ ಕಾರಣಕ್ಕೆ ಈ ವಿಚಾರವನ್ನು ಮುಂದೂಡಿದೆ. ಕಾಂಗ್ರೆಸ್ ಸರ್ಕಾರವು ಸಾಮಾಜಿಕ ನ್ಯಾಯ ನೀಡಲು ಬದ್ಧವಿದೆ. ನಾವೂ ಅದಕ್ಕೆ ಬದ್ಧರಿದ್ದೇವೆ. ಚುನಾವಣೆ ನಂತರ ಈ ಬಗ್ಗೆ ಸರ್ಕಾರ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ನಂಜುಂಡಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಮಾನಸ ತಿಪ್ಪೇಸ್ವಾಮಿ ಇತರರು ಇದ್ದರು.
-30ಕೆಡಿವಿಜಿ4: ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಶಿವಣ್ಣ, ಕೊಳ್ಳೆಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.