)
- ಆ.24ಕ್ಕೆ ಗ್ರಾಮಸಭೆಯಲ್ಲಿ ಕರಡು ಮತದಾರರ ಪಟ್ಟಿ, ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ: ಡಿಸಿ ಗಂಗಾಧರ ಸ್ವಾಮಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಗುಣಮಟ್ಟದ ಕಾರ್ಯಕ್ಕೆ ಜಿಲ್ಲಾಡಳಿತ ಅತ್ಯುನ್ನತ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿ 14,99,282 ಮತದಾರರಿಗೆ ನೀಡಲಾದ ಗಣತಿ ನಮೂನೆಯಲ್ಲಿ 12,97,702 ಗಣತಿ ನಮೂನೆಗಳನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣ ಮಾಡಿದ್ದು, ಆ.24ರಂದು ಗ್ರಾಮಸಭೆ ಮೂಲಕ ಎಲ್ಲ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಹಿಂದಿರುಗಿಸಿದ ನಮೂನೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ. ಗಣತಿ ನಮೂನೆ ಭರ್ತಿ ಮಾಡಿ ನೀಡುವ ವೇಳೆ ಮ್ಯಾಪಿಂಗ್ ಆಗದ 1,061 ಮತ್ತು ಹೆಸರು ವ್ಯತ್ಯಾಸ, ತಾಳೆಯಾಗದ 6,000 ಮತದಾರರು ಸೇರಿದಂತೆ 7,083 ಮತದಾರರಿಗೆ ಮಾತ್ರ ನೋಟಿಸ್ ನೀಡಿ, ಅಗತ್ಯ ದಾಖಲೆ ಪಡೆದುಕೊಳ್ಳಲಾಗುವುದು ಎಂದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ, ಯಾರೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ದೂರು ಬಂದಿಲ್ಲ. ಗುಣಾತ್ಮಕ ಪಟ್ಟಿ ತಯಾರಿಕೆಗೆ ಒತ್ತು ನೀಡಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಗ್ರಾಮಸಭೆಯೊಂದಿಗೆ ಎಲ್ಲ ಮತಗಟ್ಟೆ, ಸ್ಥಳೀಯ ಸಂಸ್ಥೆ, ತಾಲೂಕು ಕಚೇರಿ ಸೇರಿದಂತೆ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ವೆಬ್‍ಸೈಟ್‍ನಲ್ಲಿ ಆ.24ರಂದು ಪ್ರಕಟಿಸಲಾಗುತ್ತದೆ. ಸೆ.23ರವರೆಗೆ ಮತದಾರರಿಂದ ಆಕ್ಷೇಪಣೆ ಸ್ವೀಕರಿಸಲಾಗುತ್ತದೆ. ಆಕ್ಷೇಪಣೆ ಪರಿಶೀಲನೆ ನಡೆಸಿ ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಜಿಪಂ ಉಪ ಕಾರ್ಯದರ್ಶಿ ಮಮತ ಹೊಸಗೌಡರ್, ಉಪ ವಿಭಾಗಾಧಿಕಾರಿಗಳಾದ ದಾವಣಗೆರೆ ಸಂತೋಷಕುಮಾರ, ಹೊನ್ನಾಳಿ ಚನ್ನಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.
-21ಕೆಡಿವಿಜಿ36: