ಮನೆಗಳಿಂದ ಕಸ ಸಂಗ್ರಹಿಸಿ ಸಾಗಿಸುವ 138 ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗಿದೆ. ಶಾಂತಿನಗರ ವಿಭಾಗದಲ್ಲಿ ಜಿಪಿಎಸ್ ಆಧಾರಿತ ತ್ಯಾಜ್ಯ ಸಂಗ್ರಹಣೆ ಟ್ರ್ಯಾಕಿಂಗ್ ಪೈಲಟ್ ಯೋಜನೆ

ಬೆಂಗಳೂರು : ಮನೆಗಳಿಂದ ಕಸ ಸಂಗ್ರಹಿಸಿ ಸಾಗಿಸುವ 138 ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗಿದೆ.

ಇಂಟೆಲ್ ಟೆಕ್ನಾಲಜಿ ಪ್ರೈ.ಲಿ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ‘ಲೆಟ್ಸ್ ಬಿ ದಿ ಚೇಂಜ್’ ಹಾಗೂ ‘ಬ್ರೈನ್ ಆಬವ್ ಪ್ರೈ.ಲಿ’ ಸಹಯೋಗದೊಂದಿಗೆ ಶಾಂತಿನಗರ ವಿಭಾಗದಲ್ಲಿ ಜಿಪಿಎಸ್ ಆಧಾರಿತ ತ್ಯಾಜ್ಯ ಸಂಗ್ರಹಣೆ ಟ್ರ್ಯಾಕಿಂಗ್ ಪೈಲಟ್ ಯೋಜನೆಗೆ ಕೇಂದ್ರ ನಗರ ಪಾಲಿಕೆ ಜಂಟಿ ಆಯುಕ್ತ ರಂಗನಾಥ್. ಕೆ ಶುಕ್ರವಾರ ಚಾಲನೆ ನೀಡಿದರು.

ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ

ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಮನೆ-ಮನೆ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ. ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿವೆಯೇ? ತ್ಯಾಜ್ಯ ಸಂಗ್ರಹಣಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆಯೇ? ಎಂಬುದನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಹೇಳಿದ್ದಾರೆ.

ಕೇಂದ್ರೀಕೃತ ಕಮಾಂಡ್ ಸೆಂಟರ್ ಮೂಲಕ ವಾಹನಗಳ ಚಲನವಲನ ಮೇಲ್ವಿಚಾರಣೆ

ಬಿಎಸ್‌ಡಬ್ಲ್ಯುಎಂಎಲ್‌ನ ಕೇಂದ್ರೀಕೃತ ಕಮಾಂಡ್ ಸೆಂಟರ್ ಮೂಲಕ ವಾಹನಗಳ ಚಲನವಲನ ಹಾಗೂ ಕಾರ್ಯನಿರ್ವಹಣೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರಿಂದ ವಾಹನಗಳ ಸಂಚಾರದ ಕುರಿತು ನಿಖರ ಮಾಹಿತಿಯನ್ನು ಪಡೆದು, ಅಗತ್ಯವಿರುವ ಸಂದರ್ಭದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಜಗದೀಶ್ ತಿಳಿಸಿದ್ದಾರೆ.