ಶರಣು ಸೊಲಗಿ

ಮುಂಡರಗಿ: ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕರು ಕಸವನ್ನು ತಂದು ರಸ್ತೆಪಕ್ಕದಲ್ಲೇ ಸುರಿಯುತ್ತಾರೆ. ಇದರಿಂದಾಗಿ ಪಟ್ಟಣದ ಸ್ವಚ್ಛತೆ ಮತ್ತು ಪಟ್ಟಣಕ್ಕೆ ಆಗಮಿಸುವ ಜನರು ಇದೆಂತಾ ಪಟ್ಟಣ, ಇಲ್ಲಿ ಪುರಸಭೆ ಇಲ್ಲವೇ? ಇದ್ದರೂ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿಲ್ಲವೇ ಎನ್ನುವ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ.

ಹೆಸರೂರು ರಸ್ತೆ, ಹೆಸರೂರು ರಸ್ತೆ ಆಶ್ರಯ ಕಾಲನಿ, ಗದಗ ರಸ್ತೆ, ಎಸ್.ಎಸ್. ಪಾಟೀಲ ನಗರ, ರಾಮೇನಹಳ್ಳಿ ರಸ್ತೆ, ಗಟ್ಟಿರಡ್ಡಿಹಾಳ ರಸ್ತೆ ಹೀಗೆ ಅನೇಕ ಕಡೆ ಕಸವನ್ನು ತಂದು ಸುರಿಯಲಾಗುತ್ತಿದೆ. ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂದು ಪುರಸಭೆ‌ ಪಟ್ಟಣದ ಅನೇಕ ಕಡೆ ತಿಳಿವಳಿಕೆ ಫಲಕ ಹಾಕಿದ್ದರೂ ಸಾರ್ವಜನಿಕರು ಮಾತ್ರ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಪಟ್ಟಣದಲ್ಲಿ ಒಟ್ಟು 23 ವಾರ್ಡಗಳಿದ್ದು, ಪ್ರತಿ ವಾರ್ಡಿನಿಂದ ಮನೆ ಮನೆಯ ಕಸ ವಿಲೇವಾರಿ ಮಾಡುವುದಕ್ಕಾಗಿ ಕೆಲವೆಡೆ 2 ದಿನಕ್ಕೊಮ್ಮೆ ಇನ್ನು ಕೆಲವೆಡೆ 2- 3 ದಿನಕ್ಕೊಮ್ಮೆ ಬಂದು ಕಸ ಹಸಿ ಕಸ, ಒಣ ಕಸ ಬೇರೆ ಬೇರೆ‌ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಹಳೆ ತರಕಾರಿ‌ ಮಾರುಕಟ್ಟೆ, ಹಳೆ ಎಪಿಎಂಸಿಯಲ್ಲಿರುವ ತರಕಾರಿ ಮಾರುಕಟ್ಟೆ, ಬಜಾರ, ಬಸ್ ನಿಲ್ದಾಣ, ಬೃಂದಾವನ ವೃತ್ತ, ಕೊಪ್ಪಳ ವೃತ್ತ ಹೀಗೆ ವಿವಿಧೆಡೆ ಸಂಗ್ರಹವಾಗುವ ಕಸವನ್ನು ಪುರಸಭೆ ಟ್ರ್ಯಾಕ್ಟರ್ ಮೂಲಕ ತುಂಬಿಸಿಕೊಂಡು ವಿಲೇವಾರಿ ಮಾಡಲಾಗುತ್ತದೆ.

ಪಟ್ಟಣದ ಹೆಸರೂರು ರಸ್ತೆ, ರಾಮೇನಹಳ್ಳಿ ರಸ್ತೆ ಹಾಗೂ ಮುಖ್ಯಾಧಿಕಾರಿಯವರ ವಸತಿನಿಲಯದ ಸಮೀಪದಲ್ಲಿರುವ ಉದ್ಯಾನವನದ ಎದುರಿನಲ್ಲಿ ಸಾಕಷ್ಟು ಕಸ ತಂದು ಹಾಕಿದರೂ ಪುರಸಭೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗದೇ, ಈ ಕುರಿತು ಕಸ ಹಾಕುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.


ಹಳೆ ಎಪಿಎಂಸಿ ಮಾರುಕಟ್ಟೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ವಾರದ ಸಂತೆಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೊಳೆತ ಹಣ್ಣು, ತರಕಾರಿ ಹಾಗೂ ಸೊಪ್ಪನ್ನು ಅಲ್ಲಿಯೇ ರಸ್ತೆಯಲ್ಲಿ ಹಾಕಿ ಹೋಗಿರುತ್ತಾರೆ. ಕೆಲವು ಬಾರಿ 2- 3 ದಿನವಾದರೂ ವಿಲೇವಾರಿಯಾಗದೇ ಗಬ್ಬು ವಾಸನೆ ಬೀರುತ್ತದೆ. ಆದ್ದರಿಂದ ಮಂಗಳವಾರ ಬೆಳಗ್ಗೆ ಪುರಸಭೆಯಿಂದ ಕಸವನ್ನು ತುಂಬಿಸುವ ವ್ಯವಸ್ಥೆಯಾಗಬೇಕು ಎನ್ನುವುದು ಜನರ ಅಭಿಪ್ರಾಯ.

ಪುರಸಭೆ ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಹಾಕುವ ಸ್ಥಳಗಳನ್ನು ಗುರುತಿಸಿ ಅಲ್ಲಿ‌ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು. ಕೆಲವು ಬಾರಿ ಒಂದೊಂದು ಪ್ರದೇಶಗಳಿಗೆ 7- 8 ದಿಗಳಾದರೂ ಕಸ ಸಂಗ್ರಹ ವಾಹನಗಳು ಬಂದಿರುವುದಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ಕೇಳಿದಾಗ ವಾಹನ ರಿಪೇರಿಯಂತಹ ಕಾರಣ ಹೇಳುತ್ತಾರೆ.

ಪರಿಶೀಲಿಸಿ ಕ್ರಮ: ಪಟ್ಟಣದ ಬಹುತೇಕ ಎಲ್ಲ ವಾರ್ಡುಗಳಿಗೂ ನಿಗದಿತವಾಗಿ ಕಸ ವಿಲೇವಾರಿ ವಾಹನ ತೆರಳಿ ಕಸ ಸಂಗ್ರಹಿಸಿಕೊಂಡು ಬರುತ್ತಿದ್ದು, ಏನಾದರೂ ತೊಂದರೆಯಾಗಿ ಒಂದು ದಿನ ವಾಹನ ಬರದಿದ್ದರೂ ಮರುದಿನ ಎಲ್ಲ ಕಸ ಸಂಗ್ರಹಿಸಿಕೊಂಡು ಹೋಗುತ್ತಾರೆ. ಎಲ್ಲೆಂದರಲ್ಲಿ ಕಸ ಎಸೆಯದೇ ವಾಹನ ಬಂದಾಗಲೇ ಹಾಕಬೇಕು. ಬೇಕಾಬಿಟ್ಟಿ ಕಸ ಹಾಕುವ ಕುರಿತು ತಕ್ಷಣವೇ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.