ಶಿಥಿಲ ಕಾರಣದಿಂದ ನಗರದ ಅತ್ಯಂತ ಹಳೆಯ ಓವರ್ ಹೆಡ್ ಟ್ಯಾಂಕ್‌ವೊಂದನ್ನು ನಗರಸಭೆಯಿಂದ ತೆರವುಗೊಳಿಸಲಾಗಿದೆ. ನಗರದ ಗಾಂಧಿ ಸರ್ಕಲ್ ಸಮೀಪದ ಹಳೆ ಕೋರ್ಟ್ ಆವರಣದಲ್ಲಿರುವ ಈ ಟ್ಯಾಂಕ್ 10 ಲಕ್ಷ ಲೀ. ಸಂಗ್ರಹ ಸಾಮರ್ಥ್ಯ ಹೊಂದಿತ್ತು. ಏಳು ದಶಕಗಳ ಹಿಂದೆ ನಿರ್ಮಿಸಿದ್ದ ಈ ಟ್ಯಾಂಕ್ ನಗರದ ಜನತೆಯ ದಾಹ ತೀರಿಸುವುದರ ಜೊತೆಗೆ ಒಂದು ಹೆಗ್ಗುರುತಾಗಿತ್ತು.
- ಹರಿಹರದ ಹಳೆ ಕೋರ್ಟ್ ಆವರಣದಲ್ಲಿರುವ ಶಿಥಿಲ ಟ್ಯಾಂಕ್, 10 ಲಕ್ಷ ಲೀ. ಸಂಗ್ರಹ ಸಾಮರ್ಥ್ಯ
- - -ಕನ್ನಡಪ್ರಭ ವಾರ್ತೆ ಹರಿಹರ
ಶಿಥಿಲ ಕಾರಣದಿಂದ ನಗರದ ಅತ್ಯಂತ ಹಳೆಯ ಓವರ್ ಹೆಡ್ ಟ್ಯಾಂಕ್‌ವೊಂದನ್ನು ನಗರಸಭೆಯಿಂದ ತೆರವುಗೊಳಿಸಲಾಗಿದೆ.ನಗರದ ಗಾಂಧಿ ಸರ್ಕಲ್ ಸಮೀಪದ ಹಳೆ ಕೋರ್ಟ್ ಆವರಣದಲ್ಲಿರುವ ಈ ಟ್ಯಾಂಕ್ 10 ಲಕ್ಷ ಲೀ. ಸಂಗ್ರಹ ಸಾಮರ್ಥ್ಯ ಹೊಂದಿತ್ತು. ಏಳು ದಶಕಗಳ ಹಿಂದೆ ನಿರ್ಮಿಸಿದ್ದ ಈ ಟ್ಯಾಂಕ್ ನಗರದ ಜನತೆಯ ದಾಹ ತೀರಿಸುವುದರ ಜೊತೆಗೆ ಒಂದು ಹೆಗ್ಗುರುತಾಗಿತ್ತು.
ನಗರದ ಹೊಸ ಭರಂಪುರ, ಗಾಂಧಿನಗರ, ದೊಡ್ಡಿ ಬೀದಿ, ಕುರುಬರ ಕೇರಿ, ಮರಾಠ ಗಲ್ಲಿ, ಹವಳದ ಬೀದಿ, ನಡುವಲ ಪೇಟೆ, ತೆಗ್ಗಿನಕೇರಿ, ಬಜಾರ್ ಮೊಹಲ್ಲಾ, ಹಳೆ ಬಂಬೂ ಬಜಾರ್, ದೇವಸ್ಥಾನ ರಸ್ತೆ, ಕುಂಬಾರ ಓಣಿ, ನಾಲಾ ಮೊಹಲ್ಲಾ, ಗೂಡ್ಸ್ ಶೆಡ್ ಏರಿಯಾ, ಮೂರ್ಕಲ್ ಕಾಂಪೌಂಡ್ ಸೇರಿದಂತೆ ಹೆಚ್ಚು ಕಡಿಮೆ ನಗರದ ಅರ್ಧ ಭಾಗದ ಜನತೆಗೆ 1960ರ ದಶಕದಿಂದ ನೀರು ಸರಬರಾಜು ಮಾಡುತ್ತಿದ್ದ ಈ ಟ್ಯಾಂಕ್ ಈಗ ಟಾಟಾ, ಬೈಬೈ ಹೇಳಿದೆ.ಈ ಹಿಂದೆ ಟ್ಯಾಂಕ್ ತುಂಬಿ ಸುಮಾರು 50 ಅಡಿ ಮೇಲಿನಿಂದ ಚಿಮ್ಮುತ್ತಿದ್ದ ಹನಿ, ಹನಿ ನೀರಿನಲ್ಲಿ ಆಟವಾಡುತ್ತಿದ್ದ ಶಾಲಾ ಮಕ್ಕಳು, ಟ್ಯಾಂಕಿನ ತಣ್ಣನೆಯ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಜನರು ಈ ಟ್ಯಾಂಕ್ ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಶಿಥಿಲಗೊಂಡ ಈ ಟ್ಯಾಂಕ್ ಸಮೀಪದಲ್ಲೆ ಜಲಸಿರಿ ಯೋಜನೆಯಡಿ ಇನ್ನೊಂದು 10 ಲಕ್ಷ ಲೀ. ಸಾಮರ್ಥ್ಯದ ಹೊಸ ಟ್ಯಾಂಕ್ ಅನ್ನು 2 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆ ಟ್ಯಾಂಕ್ ಮೂಲಕವೇ ಈಗ ನೀರು ಸರಬರಾಜು ನಡೆಯುತ್ತಿದೆ.
- - -(ಬಾಕ್ಸ್)
* ಶಿಥಿಲ ಎನಿಸಿದರೂ ಗಟ್ಟಿಯಾದ ಟ್ಯಾಂಕ್ಏಳು ದಶಕಗಳ ಕಾಲ ಹರಿಹರದ ಜನರ ದಾಹ ನೀಗಿಸಿದ ಈ ಟ್ಯಾಂಕನ್ನು ಭಾನುವಾರ ತಡ ರಾತ್ರಿ ಯಂತ್ರಗಳಿಂದ ಕೆಡವಲಾಗಿದೆ. 50 ಅಡಿ ಎತ್ತರದಿಂದ ಧರಾಶಾಯಿಯಾದರೂ ಟ್ಯಾಂಕಿನ ನೀರು ಸಂಗ್ರಹಿಸುವ ಗೋಳ ಅಲ್ಪ ಪ್ರಮಾಣದಲ್ಲೂ ಬಿರುಕಾಗಿಲ್ಲ, ಒಡೆದಿಲ್ಲ. ಯಾರೋ ಗೋಳಾಕಾರವನ್ನು ತೆಗೆದು ನೆಲದ ಮೇಲೆ ಇಟ್ಟಂತೆ ಗೋಚರಿಸುತ್ತಿದೆ.
ಟ್ಯಾಂಕ್‌ಗೆ ಬಳಸಿದ ಸಿಮೆಂಟು, ಕಬ್ಬಿಣ ಈಗಲೂ ಗಟ್ಟಿ, ಮುಟ್ಟಾಗಿರುವುದು ಸ್ಥಳಕ್ಕೆ ಭೇಟಿ ನೀಡಿದ ಜನರಿಗೆ ಆಶ್ಚರ್ಯ ಮೂಡಿಸಿದೆ. ಆಧಾರ ಸ್ಥಂಭಗಳ ಸಿಮೆಂಟ್ ಬಿಡಿಸಿ ಕಬ್ಬಿಣದ ಸರಳುಗಳನ್ನು ತೆಗೆಯಲು ಯಂತ್ರ ಬಳಸಲಾಗುತ್ತಿದ್ದರೂ ಕಾರ್ಮಿಕರು ಹೆಣಗಾಡುತ್ತಿದ್ದಾರೆ. ಆ ಕಬ್ಬಿಣ ಈಗಲೂ ಶಕ್ತಿಯುತವಾಗಿಯೆ ಇದೆ.ಈ ಟ್ಯಾಂಕ್ ನಿರ್ಮಾಣಕ್ಕೆ ಬಳಸಿದ ಆಗಿನ ಕಾಲದ ಕಚ್ಚಾ ವಸ್ತುಗಳು, ಪ್ರಮಾಣಿಕ ಗುತ್ತಿಗೆದಾರರು, ಜನಪ್ರತಿನಿಧಿಗಳಿಂದಾಗಿ ಈ ಟ್ಯಾಂಕ್ ಗಟ್ಟಿ ಮುಟ್ಟಾಗಿಯೆ ಇದೆ ಎಂದು ಸಿವಿಲ್ ಎಂಜಿನಿಯರ್ ಮಂಜುನಾಥ್ ತಿಳಿಸುತ್ತಾರೆ.
ನಗರದ ಕೆಲ ಹಿರಿಯರು ಸಹ ಈ ಟ್ಯಾಂಕ್ ಸೇವೆ ಸ್ಮರಿಸಿದ್ದಾರೆ. ಆರು ದಶಕಗಳಿಂದ ನಮಗೆ ನೀರುಣಿಸಿದ ಇದು ನಮಗೆ ಕೇವಲ ಒಂದು ಟ್ಯಾಂಕ್ ಆಗಿರಲಿಲ್ಲ, ಗಾಂಧಿ ಮೈದಾನದಲ್ಲಿರುವ ಸರ್ಕಾರಿ ಪೇಟೆ ಶಾಲೆ, ಜಿಬಿಎಂಎಸ್, ಜಿಜಿಎಂಎಸ್, ಗಿರಿಯಮ್ಮ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ನೀರಿನೊಂದಿಗೆ ಆಟವಾಡುವ, ತಣ್ಣನೆ ನೆರಳನ್ನು ನೀಡುವ ನಮ್ಮ ಒಡನಾಡಿಯೆ ಆಗಿತ್ತು. ಆ ಟ್ಯಾಂಕು ಇನ್ನು ಇತಿಹಾಸ ಎನ್ನುವುದು ಬೇಸರ ಮೂಡಿಸಿದೆ ಎಂದಿದ್ದಾರೆ.- - -
-20HRR.01: ಹರಿಹರದ ಹಳೆ ಕೋರ್ಟ್ ಸಮೀಪದ ಶಿಥಿಲ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸಿರುವುದು.