ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಗುಣಮಟ್ಟದ ಕಾರ್ಯಕ್ಕೆ ಜಿಲ್ಲಾಡಳಿತ ಅತ್ಯುನ್ನತ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿ 14,99,282 ಮತದಾರರಿಗೆ ನೀಡಲಾದ ಗಣತಿ ನಮೂನೆಯಲ್ಲಿ 12,97,702 ಗಣತಿ ನಮೂನೆಗಳನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣ ಮಾಡಿದ್ದು, ಆ.24ರಂದು ಗ್ರಾಮಸಭೆ ಮೂಲಕ ಎಲ್ಲ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಆ.24ಕ್ಕೆ ಗ್ರಾಮಸಭೆಯಲ್ಲಿ ಕರಡು ಮತದಾರರ ಪಟ್ಟಿ, ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ: ಡಿಸಿ ಗಂಗಾಧರ ಸ್ವಾಮಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಗುಣಮಟ್ಟದ ಕಾರ್ಯಕ್ಕೆ ಜಿಲ್ಲಾಡಳಿತ ಅತ್ಯುನ್ನತ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿ 14,99,282 ಮತದಾರರಿಗೆ ನೀಡಲಾದ ಗಣತಿ ನಮೂನೆಯಲ್ಲಿ 12,97,702 ಗಣತಿ ನಮೂನೆಗಳನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣ ಮಾಡಿದ್ದು, ಆ.24ರಂದು ಗ್ರಾಮಸಭೆ ಮೂಲಕ ಎಲ್ಲ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಹಿಂದಿರುಗಿಸಿದ ನಮೂನೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ. ಗಣತಿ ನಮೂನೆ ಭರ್ತಿ ಮಾಡಿ ನೀಡುವ ವೇಳೆ ಮ್ಯಾಪಿಂಗ್‌ ಆಗದ 1,061 ಮತ್ತು ಹೆಸರು ವ್ಯತ್ಯಾಸ, ತಾಳೆಯಾಗದ 6,000 ಮತದಾರರು ಸೇರಿದಂತೆ 7,083 ಮತದಾರರಿಗೆ ಮಾತ್ರ ನೋಟಿಸ್ ನೀಡಿ, ಅಗತ್ಯ ದಾಖಲೆ ಪಡೆದುಕೊಳ್ಳಲಾಗುವುದು ಎಂದರು.

ಯಾರಿಗೆ ಸರಿಯಾದ ದಾಖಲೆಗಳು ಇರುವುದಿಲ್ಲವೋ, ಅಂತಹ ಮತದಾರರಿಗೆ ವಿವಿಧ ಇಲಾಖೆಗಳಿಂದ ನೀಡಲಾಗುವುದು. ಅಂತಹವರಿಗೆ ಅನ್ವಯಿಸುವ ದಾಖಲೆಗಳನ್ನು ಒದಗಿಸಲು ಸಹ ನಿರ್ದೇಶನ ನೀಡಲಾಗಿದೆ. ಆದರೆ, ಯಾವುದೇ ಮತದಾರರೂ ಆತಂಕಪಡಬೇಕಾದ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಒಟ್ಟು 2,01,063 ಮತದಾರರಿಂದ ಗಣತಿ ನಮೂನೆಗಳನ್ನು ಭರ್ತಿ ಮಾಡಿ, ವಾಪಸ್ ಪಡೆದಿಲ್ಲ. ಈ ಪೈಕಿ 34,700 ಮರಣ ಹೊಂದಿದ ಮತದಾರರು, 31,685 ಮತದಾರರು ಗುರುತು ಪತ್ತೆಯಾಗಿಲ್ಲ. 1,05,001 ಮತದಾರರು ಕಾಯಂ ಆಗಿ ಬೇರೆ ಸ್ಥಳಾಂತರವಾದವರು. 1,344 ಇತರೆ ಕಾರಣ ಮತ್ತು 28,333 ಮತದಾರರು ಬೇರೆಡೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ, ಯಾರೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ದೂರು ಬಂದಿಲ್ಲ. ಗುಣಾತ್ಮಕ ಪಟ್ಟಿ ತಯಾರಿಕೆಗೆ ಒತ್ತು ನೀಡಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಗ್ರಾಮಸಭೆಯೊಂದಿಗೆ ಎಲ್ಲ ಮತಗಟ್ಟೆ, ಸ್ಥಳೀಯ ಸಂಸ್ಥೆ, ತಾಲೂಕು ಕಚೇರಿ ಸೇರಿದಂತೆ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ವೆಬ್‍ಸೈಟ್‍ನಲ್ಲಿ ಆ.24ರಂದು ಪ್ರಕಟಿಸಲಾಗುತ್ತದೆ. ಸೆ.23ರವರೆಗೆ ಮತದಾರರಿಂದ ಆಕ್ಷೇಪಣೆ ಸ್ವೀಕರಿಸಲಾಗುತ್ತದೆ. ಆಕ್ಷೇಪಣೆ ಪರಿಶೀಲನೆ ನಡೆಸಿ ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಒಂದುವೇಳೆ ಹೆಸರಿಲ್ಲವಾದರೆ ನಮೂನೆ 6 ರೊಂದಿಗೆ ಹೊಸ ಅರ್ಜಿ ಸಲ್ಲಿಸಬಹುದು. ತಿದ್ದುಪಡಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ನಮೂನೆ-8 ಅನ್ನು ಮತದಾರರೇ ಸಲ್ಲಿಸಬೇಕು. ಜನರು ಆತಂಕಪಡುವ ಅಗತ್ಯತೆ ಇಲ್ಲ. ದೂರುರಹಿತ, ಗುಣಾತ್ಮಕ ಎಸ್ಐಆರ್‌ಗೆ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ 7,083 ಮತದಾರರಿಗಷ್ಟೇ ವಿವರ ನೀಡಲು ನೋಟಿಸ್ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪುನರುಚ್ಛರಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಜಿಪಂ ಉಪ ಕಾರ್ಯದರ್ಶಿ ಮಮತ ಹೊಸಗೌಡರ್, ಉಪ ವಿಭಾಗಾಧಿಕಾರಿಗಳಾದ ದಾವಣಗೆರೆ ಸಂತೋಷಕುಮಾರ, ಹೊನ್ನಾಳಿ ಚನ್ನಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

- - -

-21ಕೆಡಿವಿಜಿ36:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.