ಮಾನವ ಹಕ್ಕುಗಳು ವ್ಯಕ್ತಿಯ ಗೌರವ ಕಾಪಾಡುತ್ತವೆ. ಮಾಹಿತಿ ಹಕ್ಕು ನಾಗರೀಕರಿಗೆ ಅಧಿಕಾರ ನೀಡುತ್ತದೆ. ಪ್ರಜಾಪ್ರಭುತ್ವ ಜನರಿಗೆ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುತ್ತದೆ. ಈ ಮೂರು ಅಂಶಗಳು ಬಲವಾಗಿ ಇದ್ದಾಗ ಮಾತ್ರ ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ರಂಗೇಗೌಡ ತಿಳಿಸಿದ್ದಾರೆ.
- ಮಾನವ ಹಕ್ಕುಗಳು, ಮಾಹಿತಿ ಹಕ್ಕು ಕಾಯ್ದೆ, ಪ್ರಜಾಪ್ರಭುತ್ವ ವಿಷಯದ ಉಪನ್ಯಾಸ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾನವ ಹಕ್ಕುಗಳು ವ್ಯಕ್ತಿಯ ಗೌರವ ಕಾಪಾಡುತ್ತವೆ. ಮಾಹಿತಿ ಹಕ್ಕು ನಾಗರೀಕರಿಗೆ ಅಧಿಕಾರ ನೀಡುತ್ತದೆ. ಪ್ರಜಾಪ್ರಭುತ್ವ ಜನರಿಗೆ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುತ್ತದೆ. ಈ ಮೂರು ಅಂಶಗಳು ಬಲವಾಗಿ ಇದ್ದಾಗ ಮಾತ್ರ ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ರಂಗೇಗೌಡ ತಿಳಿಸಿದರು.ನಗರದ ಎವಿಕೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಹಕ್ಕುಗಳು, ಮಾಹಿತಿ ಹಕ್ಕು ಕಾಯ್ದೆ ಹಾಗೂ ಸಮಾನ ಅವಕಾಶಗಳ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ಮಾನವ ಹಕ್ಕುಗಳು, ಮಾಹಿತಿ ಹಕ್ಕು ಕಾಯ್ದೆ ಮತ್ತು ಪ್ರಜಾಪ್ರಭುತ್ವ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ದೇಶದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಕಾನೂನುಗಳು ರಚನೆ ಆಗುತ್ತವೆ. ಸಂವಿಧಾನವನ್ನು ಅರಿತು ಹಕ್ಕುಗಳನ್ನು ತಿಳಿದು, ಕರ್ತವ್ಯಗಳನ್ನು ಪಾಲಿಸುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರುವ ಜಾಗೃತ ನಾಗರೀಕರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.ಎವಿಕೆ ಕಾಲೇಜಿನ ಪ್ರಾಚಾರ್ಯೆ ಪ್ರೊ. ಜೆ.ಅನಿತಾ ಕುಮಾರಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಬಿ.ಜೆ.ರುದ್ರೇಶ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಜಿ.ಇ.ಗಣೇಶಪ್ಪ, ಎಸ್.ಚಿತ್ರ, ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ್, ಡಾ.ಆರ್.ಜಿ.ಕವಿತಾ, ಡಾ.ಕೆ.ಗುರುರಾಜ್ ಸೇರಿದಂತೆ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿನಿಯರು ಇದ್ದರು.
ಕಾರ್ಯಕ್ರಮದಲ್ಲಿ ದೀಪಾ ಪ್ರಾರ್ಥಿಸಿ, ಡಾ. ಎಚ್.ಎಂ.ಲೋಹಿತ್ ಸ್ವಾಗತಿಸಿದರು. ಎಂ.ಆರ್.ಉಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.- - -
(ಬಾಕ್ಸ್)* ಹಕ್ಕುಗಳು, ಪ್ರಜಾಪ್ರಭುತ್ವ ಪರಿಣಾಮಕಾರಿ ಜಾರಿ ಅಗತ್ಯ
ಸಂಪನ್ಮೂಲ ವ್ಯಕ್ತಿಯಾದ ಜಿಲ್ಲಾ ವಕೀಲರ ಸಂಘದ ನಿಟಕಪೂರ್ವ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಒಬ್ಬ ಮನುಷ್ಯನಿಗೆ ಗೌರವದಿಂದ ಬದುಕುವ ಹಕ್ಕು, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು, ಅನ್ಯಾಯದ ವಿರುದ್ಧ ಪ್ರಶ್ನಿಸುವ ಹಕ್ಕು ಹಾಗೂ ಸರ್ಕಾರ ಏನು ಮಾಡುತ್ತದೆ ಎಂದು ತಿಳಿದುಕೊಳ್ಳುವ ಹಕ್ಕು ಇರಬೇಕು. ಇವೆಲ್ಲವೂ ಒಂದು ಸಶಕ್ತ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಾಗಿವೆ. ಮಾನವ ಹಕ್ಕುಗಳು ಎಂದರೆ ಸರ್ಕಾರ ಕೊಟ್ಟ ಭಿಕ್ಷೆ ಅಲ್ಲ, ಅವು ಹುಟ್ಟಿನಿಂದ ಬಂದ ಹಕ್ಕುಗಳು, ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಕೇವಲ ಪುಸ್ತಕದಲ್ಲಿ ಇದ್ದರೆ ಸಾಲದು, ಅವು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದರು.- - -
-20ಕೆಡಿವಿಜಿ34:ದಾವಣಗೆರೆಯ ಎವಿಕೆ ಮಹಿಳಾ ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳು, ಮಾಹಿತಿ ಹಕ್ಕು ಕಾಯ್ದೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನ್ಯಾಯಾಧೀಶ ಸಿ.ರಂಗೇಗೌಡ ಉದ್ಘಾಟಿಸಿದರು.