ಸಂಸ್ಕೃತಿಯೊಂದಿಗೆ ಪರಿಸರ ಕಾಪಾಡಲು ಒತ್ತು ನೀಡಬೇಕು: ಅಜ್ಜಿಕುಟ್ಟಿರ ಎಸ್. ಬೋಪಣ್ಣ

KannadaprabhaNewsNetwork | Published : Dec 28, 2024 1:00 AM

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಸಾಂಸ್ಕೃತಿಕ ದಿನಾಚರಣೆ ಹಾಗೂ ಪುತ್ತರಿ ನಮ್ಮೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರೊಂದಿಗೆ ಕೊಡಗಿನ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಜ್ಜಿಕುಟ್ಟಿರ ಎಸ್. ಬೋಪಣ್ಣ ಅಭಿಪ್ರಾಯಪಟ್ಟರು.ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕೊಡವ ಸಾಂಸ್ಕೃತಿಕ ದಿನಾಚರಣೆ ಹಾಗೂ ಪುತ್ತರಿ ನಮ್ಮೆ ಕಾರ್ಯಕ್ರಮದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದಿನಂತೆ ಕೊಡಗನ್ನು ನಾವು ಹೊರಗಿನವರಿಗೆ ಪರಿಚಯಿಸುವ ಅಗತ್ಯ ಇಲ್ಲ. ಕೊಡಗಿನ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಇಷ್ಟಪಟ್ಟು ಹೆಚ್ಚಿನವರು ಕೊಡಗಿಗೆ ಬರುತ್ತಿದ್ದಾರೆ. ಆದ್ದರಿಂದ ಕೊಡಗಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿಯೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಇದರೊಂದಿಗೆ ನಾವು ಸಹ ಕೊಡಗಿನ ಪರಿಸರ ಉಳಿಸುವ ಹಾಗೂ ಕೊಡಗನ್ನು ಸ್ವಚ್ಛವಾಗಿ ಇಡಲು ಕಾಳಜಿ ವಹಿಸಬೇಕು ಎಂದು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಕಲೆ ಸಂಸ್ಕೃತಿಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಕೊಡವರು ಎಷ್ಟೇ ಉನ್ನತ ಸ್ಥಾನಕ್ಕೆ ತಲುಪಿದರೂ ನಮ್ಮ ಸಂಸ್ಕೃತಿಯನ್ನು ಅನುಸರಿಸಬೇಕು. ಇದರಿಂದ ನಮಗೆ ಗೌರವ ದೊರೆಯುತ್ತದೆ. ನಾನು ನಿವೃತ್ತಿಯಾಗುವ ಸಂದರ್ಭ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರು ಕೊಡವ ಭಾಷೆಯನ್ನು ಕಲಿತು ನನ್ನ ಬಗ್ಗೆ ಒಳ್ಳೆಯ ಮಾತನಾಡಿ ಗೌರವ ನೀಡಿದ್ದಾರೆ. ನಾವು ಕೂಡ ಕೊಡವಾಮೆಯನ್ನು ಕಾಪಾಡಿಕೊಂಡು, ಅನುಸರಿಸಿದರಿಂದ ಈ ಗೌರವ ದೊರೆತಿದೆ ಎಂದರು.

ಪೊನ್ನಂಪೇಟೆ ಕೊಡವ ಸಮಾಜ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದರಲ್ಲಿ ಮದುವೆ ಮುಹೂರ್ತ ದಿನ ಗಂಡು ಹೆಣ್ಣು ದಾಂಪತ್ಯಕ್ಕೆ ಕಾಲಿಡುವ ಪವಿತ್ರ ಗಳಿಗೆಯಲ್ಲಿ ಮದ್ಯ ನಿಷೇಧ ಮಾಡಿರುವುದನ್ನು ಅವರು ಸ್ವಾಗತಿಸಿದರು.

ಮತ್ತೋರ್ವ ಮುಖ್ಯ ಅತಿಥಿ, ಮಹಾವೀರ ಚಕ್ರ ಪ್ರಶಸ್ತಿಗೆ ಭಾಜನರಾದ ನಿವೃತ್ತ ಕರ್ನಲ್ ಪುಟ್ಟಿಚಂಡ ಗಣಪತಿ ಮಾತನಾಡಿ, ಕೊಡವರು ಮನೆಯಲ್ಲಿ ಹಬ್ಬ ಮಾಡುವುದರೊಂದಿಗೆ ಸಾರ್ವತ್ರಿಕವಾಗಿ ಹಬ್ಬ ಆಚರಣೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಪರಿಚಯವನ್ನು ಯುವ ಪೀಳಿಗೆಗೆ ಮಾಡಿಕೊಡಬೇಕು. ಕೊಡವ ಸಂಸ್ಕೃತಿ ಮೇಲೆ ಅಭಿಮಾನ ಹಾಗೂ ಅದಕ್ಕೆ ಸನ್ಮಾನ ದೊರೆತಾಗ ಅದು ಬೆಳವಣಿಗೆ ಸಾಧಿಸಲು ಸಾಧ್ಯವಿದೆ. ಕೊಡಗಿನ ಹೊರಗೆ ನೆಲೆಸಿರುವ ಕೊಡವರು ತಮ್ಮ ಮತದಾನ ಹಕ್ಕನ್ನು ಕೊಡಗಿಗೆ ವರ್ಗಾಯಿಸಿಕೊಳ್ಳುವಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಸಂಸ್ಕೃತಿ ಹಾಗೂ ಜನಪದ ನಿಂತ ನೀರಾಗಬಾರದು. ಅದು ಹರಿಯುವ ನೀರಾಗಬೇಕು. ಅದು ಹಿರಿಯರಿಂದ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು. ಕೊಡವ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಬೆಳೆಸಲು ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಸಾಂಸ್ಕೃತಿಕ ದಿನಾಚರಣೆ ಹಾಗೂ ಪುತ್ತರಿ ನಮ್ಮೆಯನ್ನು ಬಹಳಷ್ಟು ವರ್ಷಗಳಿಂದ ಸಮಾಜ ನಡೆಸುತ್ತಾ ಬಂದಿದೆ. ಈ ಮೂಲಕ ಜನಪದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.

ಮದುವೆ ಸಂದರ್ಭದ ಮದ್ಯ ನಿಷೇಧವನ್ನು ಹಿಂಪಡೆಯಲ್ಲ:ಕೊಡವ ಜನಾಂಗದಲ್ಲಿ ಜನಸಂಖ್ಯೆ ಹೆಚ್ಚಾದಾಗ ನಮ್ಮ ಭಾಷೆ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳನ್ನು ನಡೆಸಿ ಕೊಂಡು ಹೋಗಲು ಸಾಧ್ಯವಿದೆ. ಆದ್ದರಿಂದ ಮೂರು ಮಕ್ಕಳು ಇರುವ ದಂಪತಿಗಳ ಮೂರನೇ ಮಗುವಿಗೆ ಮದುವೆ ಮಂಟಪವನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾಗೆಯೇ ಕೊಡವರಲ್ಲಿ ಸೇನಾ ಪರಂಪರೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಮದುವೆಗೆ ಮಂಟಪವನ್ನು ಉಚಿತವಾಗಿ ನೀಡಲಾಗುತ್ತಿದೆ ಹಾಗೂ ಶುಭ ಮುಹೂರ್ತದಲ್ಲಿ ದಾಂಪತ್ಯಕ್ಕೆ ಕಾಲಿಡುತ್ತಿರುವ ವಧು-ವರರಿಗೆ ಶುಭ ಹಾರೈಸುವ ಸಂದರ್ಭದಲ್ಲಿ ಮದ್ಯ ಬಳಸುವುದಕ್ಕೆ ಸಮಾಜ ನಿಷೇಧ ವಿಧಿಸಿ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಉತ್ತಮ ಬೆಂಬಲ ದೊರೆತಿದೆ. ಯಾವುದೇ ಕಾರಣಕ್ಕೆ ಇದನ್ನು ಹಿಂಪಡೆಯುವುದಿಲ್ಲ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಸ್ಪಷ್ಟಪಡಿಸಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಸಾಂಸ್ಕೃತಿಕ ತಂಡ, ಅಪ್ಪಚ್ಚ ಕವಿ ವಿದ್ಯಾಲಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಣಮಂಡ ವೇಣು ಅವರ ಹಾಡು ಆಕರ್ಷಕವಾಗಿತ್ತು.

ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಸಮಾಜದ ಉಪಾಧ್ಯಕ್ಷ ಚಿರಿಯಪಂಡ ಇಮ್ಮಿ ಭೋಜಮ್ಮ ಸ್ವಾಗತಿಸಿದರು. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ವಂದಿಸಿದರು. ಬಲ್ಲಡಿಚಂಡ ಕಸ್ತೂರಿ ಕಾರ್ಯಕ್ರಮ ನಿರ್ವಹಿಸಿದರು. ತದನಂತರ ಪುತ್ತರಿ ನಮ್ಮೆ ಮಂದ್ ಮರಿಯುವೋ ಕಾರ್ಯಕ್ರಮ ನಡೆಯಿತು. ಪುತ್ತರಿ ವಿಶೇಷ ಖಾದ್ಯ ಸಾಮೂಹಿಕವಾಗಿ ಸೇವಿಸಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ,ನಿರ್ದೇಶಕರಾದ ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಮೂಕಳೆರ ಕಾವ್ಯ ಕಾವೇರಮ್ಮ,ಚೀರಂಡ ಕಂದಾ ಸುಬ್ಬಯ್ಯ ಹಾಜರಿದ್ದರು.

Share this article