ಗದಗ: ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದೆ. ಆದರೆ ಪಿಂಜಾರ ನದಾಫ್ ಸಮುದಾಯದ ಶಿಕ್ಷಣಕ್ಕೆ ಒತ್ತು ನೀಡಿಲ್ಲ. ನಿಮ್ಮ ಮುಂದಿನ ಪೀಳಿಗೆ ಶಿಕ್ಷಣದಿಂದ ವಂಚಿರಾಗಬಾರದು ಅದಕ್ಕಾಗಿ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಅವಕಾಶ ಸಿಕ್ಕಾಗ ಪಿಂಜಾರ ನದಾಫ್ ಸಮುದಾಯದ ಜನರನ್ನು ಎಪಿಎಂಸಿ ಸದಸ್ಯರಾಗಿ, ಸ್ಥಳೀಯ ಸಂಸ್ಥೆ ಸದಸ್ಯ ಹಾಗೂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತ ಬಂದಿದ್ದೇವೆ. ಪಿಂಜಾರ, ನದಾಫ್ ಸಮುದಾಯದ ಜನರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಬಿಜೆಪಿ ಸರ್ಕಾರ ಅವಧಿಯಲ್ಲಿ ಕೆಟಗರಿ 1 ವರ್ಗವನ್ನು ನೀಡಿತ್ತು. ಆದರೆ ಅಧಿಕಾರಿಶಾಹಿ ವರ್ಗ ಪಿಂಜಾರ ನದಾಫ್ ಸಮುದಾಯಕ್ಕೆ ಕೆಟಗರಿ 1ಪತ್ರ ನೀಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ನದಾಫ್ ಪಿಂಜಾರ ನಿಗಮ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿತ್ತು. ಗೆಜೆಟ್ ಹೊರಡಿಸಿತ್ತು. ಆದರೆ ಇಂದಿನ ಸರ್ಕಾರದಲ್ಲಿ ಈ ಎರಡು ಬೇಡಿಕೆ ಕಡೆಗಣಿಸಲಾಗಿದೆ. ಎಚ್.ಕೆ. ಪಾಟೀಲರು ಈ ಎರಡೂ ಬೇಡಿಕೆ ಈಡೇರಿಸಬೇಕು ಎಂದರು.ನಗರಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮುಂತಾದವರು ಮಾತನಾಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಆರ್. ಯಾವಗಲ್, ಜೆ.ಡಿ.ನದಾಫ್ ಮುಂತಾದವರು ಹಾಜರಿದ್ದರು.
ಮುಸ್ಲಿಂ ಸಮುದಾಯದಲ್ಲಿ ಶೇ. 30 ರಷ್ಟು ಪಿಂಜಾರ, ನಧಾಫ್ ಸಮುದಾಯದವರು ಇದ್ದಾರೆ. ಆದರೆ ಅವಕಾಶಗಳಿಂದ ವಂಚಿತರಾದ ಹಿನ್ನೆಲೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಮುಸ್ಲಿಂ ಸಮುದಾಯದಲ್ಲಿ ನೀಡುವ ಮೀಸಲಾತಿಯಲ್ಲಿ ಪಿಂಜಾರ ನದಾಫ್ ಅವರಿಗೆ ಒಳ ಮೀಸಲಾತಿ ನೀಡಬೇಕು ಎಂದು ಸಂಘದ ಮುಖಂಡ ಜೆ.ಡಿ.ನದಾಫ್ ತಿಳಿಸಿದ್ದಾರೆ.ಪ್ರತಿ ಜಿಲ್ಲೆಯಲ್ಲಿ ನದಾಫ್ ಪಿಂಜಾರ ಸಮುದಾಯ ಭವನ ನಿರ್ಮಾಣ, ನಿಗಮ ಸ್ಥಾಪನೆಗೆ ಆಗ್ರಹ, ಶಿಕ್ಷಣದಲ್ಲಿ ಶೇ.25 ರಷ್ಟು ಮೀಸಲಾತಿ, ಪಿಂಜಾರ ನದಾಫ್ ಸಮುದಾಯಕ್ಕೆ ಕೆಟಗರಿ 1ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹ, ಕುಲಶಾಸ್ತ್ರ ಅಧ್ಯಯನ ಅಗತ್ಯ, ಮಹಿಳಾ ಸಬಲೀಕರಣಕ್ಕಾಗಿ ಶಿಕ್ಷಣ, ತರಬೇತಿ ನೀಡಲು ವಕ್ಫ ಜಮೀನು ನೀಡಬೇಕು, ಸರ್ಕಾರದ ಸಮಿತಿಗಳಲ್ಲಿ ಅವಕಾಶ ಇದ್ದರೆ ಪಿಂಜಾರ ನದಾಫ ಸಮುದಾಯದವರನ್ನು ನೇಮಿಸುವುದು, ಸಮುದಾಯಕ್ಕೆ ಎಂಎಲ್ ಸಿ ಸ್ಥಾನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.