ಕನ್ನಡಪ್ರಭ ವಾರ್ತೆ ಕುಶಾಲನಗರಎಲ್ಲಾ ಪೌರ ಕಾರ್ಮಿಕರಿಗೆ ನಿವೇಶನ ಸೌಲಭ್ಯ ಕಲ್ಪಿಸಬೇಕು. ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸ್ಥಳೀಯ ಆಡಳಿತ ವಿಶೇಷ ಒತ್ತು ನೀಡಬೇಕು ಎಂದು ಪುರಸಭೆ ಸದಸ್ಯ ಬಿ.ಜಯವರ್ಧನ್ ಸಲಹೆ ನೀಡಿದರು.
ಸ್ಥಳೀಯ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ, ನಿತ್ಯ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪಟ್ಟಣದ ಶುಚ್ಚಿತ್ವಕ್ಕೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಸಮಾಜದ ಸ್ವಾಸ್ಥ್ಯವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ ದೇಶದ ರಕ್ಷಣೆಯಲ್ಲಿ ಸೈನಿಕ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ಪೌರ ಕಾರ್ಮಿಕರ ಸೇವೆ ಮಹತ್ವದ್ದಾಗಿದೆ. ರೋಗರುಜಿನಗಳು ಬರದಂತೆ ಶುಚ್ಚಿತ್ವಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅವರ ಸೇವೆ ಅನನ್ಯವಾದದ್ದು, ಸಿಬ್ಬಂದಿಗಳ ಕೊರತೆಯ ನಡುವೆ ಇರುವಷ್ಟು ಮಂದಿ ಉತ್ತಮವಾಗಿ ಸೇವೆ ಸಲ್ಲಿಸುತ್ತ ಪಟ್ಟಣ ಸ್ವಚ್ಛತೆಗೆ ಹಾಗೂ ಅಂದಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಅಂಶ ಎಂದರು.ಪೌರಕಾರ್ಮಿಕರ ಆರೋಗ್ಯ ಸುರಕ್ಷತೆ ಸೇರಿದಂತೆ ಕಚೇರಿ ವತಿಯಿಂದ ದೊರಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಭರವಸೆ ನೀಡಿದರು.ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯ ಸುಧಾರಣೆ ವಿಶೇಷ ಒತ್ತು ನೀಡಲಾಗುತ್ತಿದೆ. ಪ್ರತಿ ವರ್ಷ ಅಪೋಲೊ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು. ಇದೆ ಸಂದರ್ಭ ಕಾರ್ಮಿಕರಿಗೆ ನಗದು ಮತ್ತಿತರ ಕಿರು ಕಾಣಿಕೆ ವಿತರಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, ಸದಸ್ಯರಾದ ಪ್ರಮೋದ್ ಮುತ್ತಪ್ಪ, ವಿ.ಎಸ್.ಆನಂದಕುಮಾರ್, ಎಂ.ಕೆ.ದಿನೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಸುರೇಯಾಬಾನು, ಶಿವಶಂಕರ್, ವಿ.ಜೆ. ನವೀನ್, ಎಂ.ಎಂ.ಪ್ರಕಾಶ್, ಬಿ.ಎಲ್.ಜಗದೀಶ್, ಪದ್ಮಾ, ಪೌರ ನೌಕರರ ಸೇವಾ ಸಂಘದ ಅಧ್ಯಕ್ಷೆ ರಶ್ಮಿ, ಜಿಲ್ಲಾ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ಮೋಹನ್, ಮಾಜಿ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ನಂಜುಂಡ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು.