ಮೇಲುಕೋಟೆಯಲ್ಲಿ ಸ್ವಚ್ಛತೆಗಾಗಿ ಪೌರಕಾರ್ಮಿಕರನ್ನು ನೇಮಿಸಿ

KannadaprabhaNewsNetwork |  
Published : Nov 18, 2024, 12:00 AM ISTUpdated : Nov 18, 2024, 12:01 AM IST
12ಕೆಎಂಎನ್ ಡಿ21 | Kannada Prabha

ಸಾರಾಂಶ

ಚೆಲುವನಾರಾಯಣಸ್ವಾಮಿ ದೇವಾಲಯ, ಅರಣ್ಯ ಇಲಾಖೆ ಮತ್ತು ಗೋಮಾಳಕ್ಕೆ ಸೇರಿದ ಸರ್ಕಾರಿ ಸರ್ವೇ ನಂಬರ್‌ಗಳಲ್ಲಿರುವ ಆಸ್ತಿಗಳಾದ ಸಂತೆ ಮೈದಾನ ಬಾಗಲಾಚೆ, ಮೂಡಲಬಾಗಿಲ ಬಡಾವಣೆಗಳಲ್ಲಿ ತಲೆಮಾರಿನಿಂದ ವಾಸವಾಗಿರುವವರಿಗೆ ಸಾಲ ಪಡೆಯಲು ಮನೆ ನಿರ್ಮಾಣ ಮಾಡಲು ಇ- ಖಾತೆ ಹೊಂದಲೂ ಅವಕಾಶವಿಲ್ಲ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪ್ರವಾಸಿತಾಣ ಮೇಲುಕೋಟೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲು ಪೌರಕಾರ್ಮಿಕರನ್ನು ನೇಮಿಸುವಂತೆ ಮಂಗಳವಾರ ಗ್ರಾಮ ಪಂಚಾಯ್ತಿ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ನಾಗರಿಕರು ಒತ್ತಾಯಿಸಿದರು.

ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ನಾಗರಿಕರು ಸಲಹೆ ನೀಡಿ, ಪ್ರವಾಸಿ ತಾಣ ಮೇಲುಕೋಟೆಗೆ ನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಮುಂಭಾಗದಲ್ಲಿ ಚರಂಡಿ ದುರಸ್ತಿ ಮಾಡಬೇಕು, ಅಂಗಡಿ ಮುಂಗಟ್ಟುಗಳಿಂದ ಸ್ವಚ್ಛತಾ ಶುಲ್ಕ ಪಡೆಯಬೇಕು, ಕೋಳಿಮಾಂಸದ ಅಂಗಡಿಗಳನ್ನು ನಿಯಂತ್ರಿಸಬೇಕು ಎಂಬ ಹಲವು ಸಲಹೆಗಳನ್ನು ನೀಡಿದರು.

ಹಿಂದಿನ ಗ್ರಾಮಸಭೆಯಲ್ಲಿನ ನಿರ್ಣಯಗಳನ್ನು ಆದ್ಯತೆ ಮೇಲೆ ಅನುಷ್ಠಾನ ಮಾಡಬೇಕು, ಮೀನುಸಾಕಣೆ, ಕೆರೆ- ಕಟ್ಟೆ, ಕೊಳಗಳನ್ನು ಹರಾಜು ಮಾಡಬೇಕು. ಸರ್ಕಾರಿ ಬಾಲಕರ ಶಾಲೆಯಲ್ಲಿ 2021ರ ಶಿಕ್ಷಣ ಇಲಾಖೆ ಗ್ರಾಪಂ ಸಹಯಗೋಗದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಉಪಯೋಗಕ್ಕೆ ಶಾಲೆಗೆ ಹಸ್ತಾಂತರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸ್ವಚ್ಛತೆ ಕಾಪಾಡಬೇಕು. ಪಾರ್ಕಿಂಗ್‌ಗೆ ವ್ಯವಸ್ಥಿತ ಜಾಗ ಕಲ್ಪಿಸುವಂತೆ ಮನವಿಗಳು ಕೇಳಿಬಂದವು.

ಬಡವರಿಗೆ ಮನೆ ನಿರ್ಮಾಣದ ಗ್ರ್ಯಾಂಟ್ ನೀಡುವ ವಿಚಾರದಲ್ಲಿ ಚರ್ಚಿಸಿದ ಗ್ರಾಮಸಭೆ ಬಸವ ವಸತಿ ಯೋಜನೆ ಮತ್ತು ಪ್ರದಾನ ಮಂತ್ರಿ ಅವಾಜ್ ಯೋಜನೆಯಡಿ 6 ಮಂದಿ ಬಡ ಫಲಾನುಭವಿಗಳನ್ನು ಆಯ್ಕೆಮಾಡಿ ಮನೆ ನಿರ್ಮಾಣಕ್ಕೆ ಅನುದಾನ ನೀಡಬಹುದು ಎಂದು ತೀರ್ಮಾನಿಸಿತು.

ಗ್ರಾಪಂ ಪಿಡಿಒ ರಾಜೇಶ್ವರ್ ಮಾತನಾಡಿ, 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ 17 ಲಕ್ಷ ರು. ಅನುದಾನದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಾಮಗಾರಿ ಪಟ್ಟಿಯನ್ನು ಸಭೆ ಮುಂದಿಟ್ಟರು.

ಶಾಸಕರಿಗೆ ಪ್ರಸ್ತಾವನೆ:

ಚೆಲುವನಾರಾಯಣಸ್ವಾಮಿ ದೇವಾಲಯ, ಅರಣ್ಯ ಇಲಾಖೆ ಮತ್ತು ಗೋಮಾಳಕ್ಕೆ ಸೇರಿದ ಸರ್ಕಾರಿ ಸರ್ವೇ ನಂಬರ್‌ಗಳಲ್ಲಿರುವ ಆಸ್ತಿಗಳಾದ ಸಂತೆ ಮೈದಾನ ಬಾಗಲಾಚೆ, ಮೂಡಲಬಾಗಿಲ ಬಡಾವಣೆಗಳಲ್ಲಿ ತಲೆಮಾರಿನಿಂದ ವಾಸವಾಗಿರುವವರಿಗೆ ಸಾಲ ಪಡೆಯಲು ಮನೆ ನಿರ್ಮಾಣ ಮಾಡಲು ಇ- ಖಾತೆ ಹೊಂದಲೂ ಅವಕಾಶವಿಲ್ಲ. ಸಮಸ್ಯೆ ಪರಿಹರಿಸಲು ಕೋರಿ ಸಾರ್ವಜನಿಕರು ಮನವಿ ಮಾಡಿದ್ದರು. ನಮ್ಮ ಹಂತದಲ್ಲಿ ತೀರ್ಮಾನ ಮಾಡಲು ಸಾಧ್ಯವಿಲ್ಲದ ಕಾರಣ ಗ್ರಾಪಂ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಮಾಡಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸಲು ಶಾಸಕರಿಗೆ ಪ್ರಸ್ತಾವನೆ ಕಳುಹಿಸಿ ಕೊಡಲಾಗುತ್ತದೆ ಎಂದು ವಿವರಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಣಿ ಮುರುಗನ್ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ, ಕುಡಿಯುವ ನೀರು ನೈರ್ಮಲ್ಯ ಯೋಜನೆ ಇಂಜಿನಿಯರ್ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷ ಜಿ.ಕೆ.ಕುಮಾರ್, ಸದಸ್ಯರಾದ ಸೋಮಶೇಖರ್ ಜಯರಾಮೇಗೌಡ, ಲಕ್ಷ್ಮಮ್ಮ, ಭಾಗ್ಯಮ್ಮ ರಾಜೇಶ್ವರಿ, ರೇಷ್ಮೇ ಇಲಾಖೆ ಪುಟ್ಟಸ್ವಾಮಿಗೌಡ, ಸಮಾಜಕಲ್ಯಾಣ ಇಲಾಖೆ ಪ್ರಸನ್ನಕುಮಾರ್, ಸಾಮಾಜಿಕ ಅರಣ್ಯ ಯೋಜನೆಯ ಯೋಗೇಗೌಡ, ಬಾಲಕರ ಶಾಲೆ ಮುಖ್ಯಶಿಕ್ಷಕರಾದ ಸಂತಾನರಾಮನ್, ಮಂಜುನಾಥ್ , ಆರೋಗ್ಯ ಇಲಾಖೆಯ ಉಮಾ ದೇವಮ್ಮ, ಸಂಜೀವಿನಿ ಒಕ್ಕೂಟದ ಕವಿತ, ಸವಿತ ಭಾಗವಹಿಸಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ದಿಲೀಪ್, ಪುಳಿಯೋಗರೆ ರವಿ, ದಿಲೀಪ್, ಈಶಮುರುಳಿ, ನಾಗೇಂದ್ರ, ನಿಂಗೇಗೌಡ, ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಅಗತ್ಯ ಸಲಹೆ ನೀಡಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?