ನೌಕರರು ಸಾಮಾಜಿಕ ಸೇವೆಯಲ್ಲಿ ತೊಡಗಿ: ಹೊರಟ್ಟಿ

KannadaprabhaNewsNetwork | Published : Aug 7, 2024 1:04 AM

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ನೌಕರರು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.66 ಲಕ್ಷ ಹುದ್ದೆ ಭರ್ತಿ ಮಾಡುವ ಮೂಲಕ ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಬೇಕಾಗಿದೆ.

ಧಾರವಾಡ:

ಸರ್ಕಾರಿ ನೌಕರರು ಸರ್ಕಾರದ ಕೆಲಸದ ಜತೆಗೆ ಸಂಘ-ಸಂಸ್ಥೆಗಳ ಸದಸ್ಯತ್ವ, ಸಂಘಟನೆಗೆ ಸೀಮಿತರಾಗಬಾರದು. ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಋಣ ತೀರಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು 7ನೇ ವೇತನ ಆಯೋಗ ಜಾರಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನೆ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಂದರ್ಭದಲ್ಲಿ ನೌಕರರು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.66 ಲಕ್ಷ ಹುದ್ದೆ ಭರ್ತಿ ಮಾಡುವ ಮೂಲಕ ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಬೇಕೆಂದು ಹೊರಟ್ಟಿ ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದೆ. ನೌಕರರು ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ಮೂಲಕ ರೈತರಿಗೆ, ಅಸಹಾಯಕರಿಗೆ ಯೋಜನೆ ತಲುಪಿಸಬೇಕು. ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರನ ಪಾತ್ರ ಮುಖ್ಯವಾಗಿದೆ ಎಂದರು. ನೌಕರರಿಗೆ ಹಳೆಯ ಪಿಂಚಣಿ ಸಹ ಗ್ಯಾರಂಟಿ ಆಗಿದೆ ಎಂದು ಇದೇ ವೇಳೆ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, 7ನೇ ವೇತನ ಆಯೋಗದ ಬೇಡಿಕೆ ಈಡೇರಿದೆ. ಹಾಗೆಯೇ, ಹಳೆಯ ಪಿಂಚಣಿ ಕೆಲಸ ಸಹ ಆಗಲಿ ಎಂದರು

ವೈಶುದೀಪ ಫೌಂಡೇಶ್ನ್‌ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ರಮೇಶ ಲಿಂಗದಾಳ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ, ರಾಜಶೇಖರ ಬಾಣದ, ಮಲ್ಲಿಕಾರ್ಜುನ ಸೊಲಗಿ, ದೇವಿದಾಸ ಶಾಂತಿಕರ, ಗಿರೀಶ ಚೌಡಕಿ, ರಾಜೇಶ ಕೋನರಡ್ಡಿ, ವ್ಹಿ.ಎಫ್. ಚುಳುಕಿ, ಡಾ. ಪ್ರಹ್ಲಾದ ಗೆಜ್ಜಿ, ಎ.ಬಿ. ಕೊಪ್ಪದ ಆರ್.ಎಂ. ಹೊಲ್ತಿಕೋಟಿ, ಮುತ್ತಪ್ಪ ಅಣ್ಣಿಗೇರಿ, ಡಾ. ಸುರೇಶ ಹಿರೇಮಠ, ಪಿ.ಬಿ. ಕುರಬೆಟ್ಟ, ವಿನಯ ಮೂಷನ್ನವರ ಇದ್ದರು.

Share this article