ನರಗುಂದ: ತಾಲೂಕಿನಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು ಬರಗಾಲ ಇದೆ ಎಂದು ಭಯಪಡಬೇಡಿ, ಏ.1ರಿಂದ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭವಾಗಲಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಸಂತೋಷ ಕುಮಾರ ಪಾಟೀಲ ಹೇಳಿದರು.
ಅವರು ಪಟ್ಟಣದ ತಾಪಂ ಸಭಾ ಭವನದಲ್ಲಿ ಕಾಯಕಬಂಧುಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬರಗಾಲವಿದೆ ಎಂದು ಗ್ರಾಮೀಣ ಪ್ರದೇಶದ ರೈತ, ಕೃಷಿ ಕೂಲಿಕಾರರಿಗೆ ಭಯಬೇಡ. ಏ.1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ.ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಬರಗಾಲದ ತೀವ್ರತೆಯಿಂದ ಕೆಲಸ ಸಿಗದಿರುವ ಆತಂಕದಲ್ಲಿರುವ ಗ್ರಾಮೀಣ ಪ್ರದೇಶ ಕೂಲಿಕಾರರಿಗೆ ನೆರವಾಗಲೆಂದು ಏ.1 ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿ ಆರಂಭಿಸಲಾಗುತ್ತಿದೆ.ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೆ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು.ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆ ನಿವಾರಿಸಲು ನರೇಗಾ ವರದಾನವಾಗಲಿದೆ. ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವಾಗಬೇಕೆಂದು ತರಬೇತಿಯಲ್ಲಿ ಭಾಗವಹಿಸಿದ್ದ ಕಾಯಕಬಂಧುಗಳಿಗೆ ತಿಳಿಸಿದರು.
ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಕಾರರಿಗೆ ₹ 18,960 ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣ ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಸದುಪಯೋಗಪಡಿಸಿಕೊಳ್ಳಲು ನೆರವಾಗುವುದು ಎಂದರು.ಪಿಡಿಓ ಕೃಷ್ಣಮ್ಮ ಹಾದಿಮನಿ ಮಾತನಾಡಿ, ನರೇಗಾ ಕೆಲಸದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಶ್ರಮವಹಿಸಬೇಕೆಂದು ತಿಳಿಸಿದರು.
ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, ಕಾಯಕಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು.ತಾಂತ್ರಿಕ ಸಂಯೋಜಕ ಹನುಮಂತ ಡಂಬಳ ಮಾತನಾಡಿ, ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ಯೋಜನೆಯಡಿ ನಿರ್ಮಿಸುವ ಕಂದಕ ಬದುಗಳ ನಿರ್ಮಾಣ ಮತ್ತು ಅನುಷ್ಠಾನ ಕುರಿತು ಮಾತನಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಸಂಯೋಜಕ ಲಕ್ಷ್ಮಣ ಪೂಜಾರಿ, ತಾಲೂಕಿನ 13ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ವರ್ಗ, ಎಂಬಿಕೆ ಮತ್ತು ಎನ್.ಆರ್.ಎಲ್.ಎಂ ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.