ಉದ್ಯೋಗ ಖಾತ್ರಿ ಕೂಲಿಗಳಾದ ಬಿಎ, ಬಿಕಾಂ, ಬಿಎಸ್ಸಿ, ಎಂಎ ಪದವೀಧರರು

KannadaprabhaNewsNetwork |  
Published : Jun 16, 2026, 02:30 AM IST
ಹೂವಿನಹಡಗಲಿ ತಾಲೂಕಿನ ಪಶ್ಚಿಮ ಕಾಲ್ವಿ ಗ್ರಾಪಂ ವ್ಯಾಪ್ತಿಯಲ್ಲಿ ಪದವೀಧರೆ ಯುವತಿ ಮನರೇಗಾದಲ್ಲಿ ಕೆಲಸ ಮಾಡುತ್ತಿರುವುದು. ಹೂವಿನಹಡಗಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪದವೀಧರರು.  | Kannada Prabha

ಸಾರಾಂಶ

ಗ್ರಾಪಂ ಮಟ್ಟದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ನಿರುದ್ಯೋಗಿ ಯುವಕರ ನೆರವಿಗೆ ಬಂದಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಕೈಲಾಗದು ಎಂದು ಮನೆಯಲ್ಲಿ ಕೈಕಟ್ಟಿ ಕುಳಿತರೆ ಹಿರಿಯರಿಗೆ ಹೊರೆಯಾಗುತ್ತೇವೆ ಎಂಬ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿನ ಪದವಿ, ಸ್ನಾತಕೋತ್ತರ ಪದವೀಧರರು, ನರೇಗಾದಲ ಉದ್ಯೋಗ ಖಾತ್ರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೌದು, ಬಿಎ, ಬಿಕಾಂ, ಬಿಎಸ್ಸಿ, ಬಿಎಡ್‌, ಸ್ನಾತಕೋತ್ತರ ಪದವಿಗಳನ್ನು ಮುಗಿಸಿದರೂ ಉದ್ಯೋಗ ಸಿಕ್ಕಿಲ್ಲ. ಆದರೂ ಕೆಲಸಕ್ಕೆ ಅರ್ಜಿ ಹಾಕಿ ಉದ್ಯೋಗದ ಭರವಸೆಯಲ್ಲೇ ಬದುಕು ನೂಕುವ ಯುವಕರಿಗೆ, ಗ್ರಾಪಂ ಮಟ್ಟದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ನಿರುದ್ಯೋಗಿ ಯುವಕರ ನೆರವಿಗೆ ಬಂದಿದೆ.

ತಾಲೂಕಿನ 26 ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ನರೇಗಾ ಯೋಜನೆ ಚಾಲ್ತಿಯಲ್ಲಿದೆ. 365 ದಿನಗಳಲ್ಲಿ ಕನಿಷ್ಠ 100 ದಿನಗಳ ಕಾಲ ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆಗೂ ಕೆರೆ ಹೂಳೆತ್ತುವುದು, ರೈತರ ಜಮೀನುಗಳಲ್ಲಿ ಬಂಡು ನಿರ್ಮಾಣ, ಅಂತರ್ಜಲ ಹೆಚ್ಚಿಸುವ ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಲ್ಲಿ ಪದವೀಧರರು ಕೆಲಸ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ಬಿಎ-403, ಬಿಕಾಂ-36, ಬಿಎಸ್ಸಿ-13, ಬಿಎಡ್‌-36, ಸ್ನಾತಕೋತ್ತರ ಪದವಿ-32, ತಾಂತ್ರಿಕ ಶಿಕ್ಷಣ-135 ಪದವೀಧರರು ಸೇರಿದಂತೆ ಒಟ್ಟು ನರೇಗಾ ಯೋಜನೆಯಲ್ಲಿ 655 ಯುವಕರು ಕಾಯಕ ಬಂಧು, ಮೇಟಿಗಳು ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅತಿ ಹೆಚ್ಚು ಹಿರೇಹಡಗಲಿ ಗ್ರಾಪಂನಲ್ಲಿ ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ಪದವೀಧರರು 102, ಪಶ್ಚಿಮ ಕಾಲ್ವಿ ಗ್ರಾಪಂನಲ್ಲಿ 80, ಹಿರೇಮಲ್ಲನಕೆರೆ ಗ್ರಾಪಂನಲ್ಲಿ 70, ಮಹಾಜನದಹಳ್ಳಿ ಗ್ರಾಪಂನಲ್ಲಿ 51, ದೇವಗೊಂಡನಹಳ್ಳಿ ಗ್ರಾಪಂನಲ್ಲಿ 47 ಪದವೀಧರರು ಕೆಲಸದಲ್ಲಿ ತೊಡಗಿದ್ದಾರೆ. ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಕೆಲವು ಅತಿಥಿ ಶಿಕ್ಷಕರು ಯೋಜನೆಯಲ್ಲಿ 60 ದಿನಗಳ ಕಾಲ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ನಾಗತಿ ಬಸಾಪುರ ಗ್ರಾಮದಲ್ಲಿ 15 ಅತಿಥಿ ಶಿಕ್ಷಕರು ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರು ಮನೆಯಲ್ಲಿ ಕಾಲ ಕಳೆಯದೇ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪದವೀಧರ ಯುವಕರು, ಯುವತಿಯರು, ಕಾಯಕ ಬಂಧು, ಮೇಟಿ ಹಾಗೂ ಅಕುಶಲ ಕೂಲಿ ಕಾರ್ಮಿಕರಾಗಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎನ್ನುತ್ತಾರೆ ಹೂವಿನಹಡಗಲಿ ತಾಪಂ ಮನರೇಗಾ ಯೋಜನೆ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ.

ನರೇಗಾ ಯೋಜನೆ ನಮ್ಮ ಕುಟುಂಬಕ್ಕೆ ಸಹಕಾರಿಯಾಗಿದೆ. ನಾನು ಪದವಿ ಮುಗಿಸಿದ್ದೇನೆ. ಕಳೆದ ಎರಡು ವರ್ಷಗಳ ಹಿಂದೆ ಕಾರ್ಮಿಕಳಾಗಿ ಕೆಲಸ ಮಾಡಿದ್ದು, ಈಗ ಮೇಟಿಯಾಗಿ ಕೆಲಸ ಮಾಡುತ್ತಿದ್ದೇನೆ. ಬಂದ ಕೂಲಿ ಹಣದಲ್ಲಿ ನನ್ನ ತಂಗಿಯನ್ನು ಓದಿಸುತ್ತಿದ್ದೇನೆ ಎನ್ನುತ್ತಾರೆ ಪಶ್ಚಿಮ ಕಾಲ್ವಿ ತಾಂಡದ ಪದವೀಧರೆ ವಿ.ಸೀತವ್ವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ