ಉದ್ಯೋಗಕ್ಕೆ ಶಿಕ್ಷಣದ ಜೊತೆ ಕೌಶಲ ಅಗತ್ಯ

KannadaprabhaNewsNetwork |  
Published : Mar 29, 2025, 12:31 AM IST
ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತಾ ತಜ್ಞ ಡಾ. ಉದಯ ಶಂಕರ ಪುರಾಣಿಕ್ ಅವರು ಸಲಹೆ ಮಾಡಿದರು. | Kannada Prabha

ಸಾರಾಂಶ

ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ದ್ವಿತೀಯ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತಾ ತಜ್ಞ ಡಾ.ಉದಯ ಶಂಕರ ಪುರಾಣಿಕ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಸ್ತುತ ಉದ್ಯೋಗ ಪಡೆಯಲು ಶಿಕ್ಷಣದೊಂದಿಗೆ ಕೌಶಲ ಹೊಂದಿರುವುದು ಅಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಬೇಕು ಎಂದು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತಾ ತಜ್ಞ ಡಾ.ಉದಯ ಶಂಕರ ಪುರಾಣಿಕ್ ಸಲಹೆ ನೀಡಿದರು. ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃತಕ ಬುದ್ದಿಮತ್ತೆ, ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೆಚ್ಚು ಅವಕಾಶಗಳಿವೆ. ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಸುಮಾರು ₹೪.೫ ಕೋಟಿ ಉದ್ಯೋಗಗಳು ಇವೆ. ತಂತ್ರಜ್ಞಾನದ ಬಗ್ಗೆ ಇರುವ ಭಯವನ್ನು ಪಕ್ಕಕಿಡಿ. ವಿದ್ಯಾರ್ಥಿಗಳು ಇಂದಿನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇರುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಿ. ಕೌಶಲ ಶಿಕ್ಷಣದತ್ತ ಒಲವು ತೋರಿ ಎಂದರು. ಭವಿಷ್ಯದ ದೃಷ್ಟಿಯಿಂದ ಉದ್ಯೋಗಕ್ಕೆ ಹೆಚ್ಚು ಅವಕಾಶಗಳಿರುವ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಲಿಯಲು ಪ್ರಯತ್ನಿಸಬೇಕು. ಓದನ್ನು ನಿಲ್ಲಿಸಬಾರದು. ಇಂದು ಕಲಿಯಲು ಸಾಕಷ್ಟು ಕೋರ್ಸ್‌ಗಳಿವೆ. ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಥಿಯರಿ, ಪ್ರಾಯೋಗಿಕ ತರಬೇತಿಗಳನ್ನು ಪಡೆಯಬಹುದಾಗಿದೆ ಎಂದರು. ಯುವಕರು, ವಿದ್ಯಾರ್ಥಿಗಳು ಸಾಧಕರನ್ನು ರೋಲ್ ಮಾಡಲ್‌ಗಳನ್ನಾಗಿ ನೋಡಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಉಪಗ್ರಹ ತಂತ್ರಜ್ಞಾನದಲ್ಲಿ ಕರ್ನಾಟಕದವರು ಚಿಕ್ಕವಯಸ್ಸಿನಲ್ಲಿಯೇ ಗಮನಸೆಳೆಯುವ ಅಪಾರ ಸಾಧನೆ ಮಾಡಿದ್ದಾರೆ. ಇಂತಹವರ ಬಗ್ಗೆ ಹೆಚ್ಚು ತಿಳಿದುಕೊಂಡರೆ ಅವರ ಸಾಧನೆ ನಿಮಗೆ ಸ್ಫೂರ್ತಿಯಾಗಲಿದೆ. ಉದ್ಯೋಗ ಸಿಗುವುದಿಲ್ಲ ಎಂಬ ನಿರಾಸೆ ಭಾವ ಬಿಟ್ಟು ಇಂದಿನ ದಿನಮಾನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿರುವ ವ್ಯಕ್ತಿಗಳನ್ನು ಆದರ್ಶಪ್ರಾಯವಾಗಿರಿಸಿಕೊಳ್ಳಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ, ಕೌಶಲ ತಂತ್ರಜ್ಞಾನಗಳ ತಿಳಿವಳಿಕೆ ತರಬೇತಿ ಇಲ್ಲದಿದ್ದರೆ ಉದ್ಯೋಗಕ್ಕೆ ಕಷ್ಟವಾಗಬಹುದು. ಇದಕ್ಕಾಗಿಯೇ ವಿವಿ ಹೆಸರಾಂತ ಸಂಸ್ಥೆಗಳ ಸಹಯೋಗದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಿದೆ. ವ್ಯಾಸಾಂಗದ ಅವಧಿಯಲ್ಲಿಯೇ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ತರಬೇತಿ ನಡೆಸುತ್ತಿದೆ ಎಂದರು. ಪದವಿ ಕಾಲೇಜುಗಳಲ್ಲಿ ಬಿಸಿಎ ವಿಷಯಗಳನ್ನು ಪ್ರಾರಂಭಿಸಿದ್ದೇವೆ. ಪದವಿ ಹಂತದಲ್ಲಿಯೂ ಸರ್ಟಿಫಿಕೆಟ್ ಕೋರ್ಸ್‌ಗಳನ್ನು ವಿಸ್ತರಿಸಲು ಯೋಚಿಸಿದ್ದೇವೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಬೆಳವಣಿಗೆ ಸಾಧ್ಯ. ನಮ್ಮ ವಿವಿ 2 ವರ್ಷ ಪೂರ್ಣಗೊಳಿಸಿ 3ನೇ ವರ್ಷಕ್ಕೆ ಕಾಲಿರಿಸಿದೆ. ಇಂತಹ ಸಂದರ್ಭದಲ್ಲಿ ಹೆಸರಾಂತ ತಂತ್ರಜ್ಞಾನ ಸಾಧಕರನ್ನು ಆಹ್ವಾನಿಸಿ ಅವರ ಮಾರ್ಗದರ್ಶನ ಅನುಭವ ತಿಳಿಸುವ ಮಹತ್ತರಕಾರ್ಯ ಮಾಡಲಾಗುತ್ತಿದೆ ಎಂದರು. ಬೆಳಗಾವಿಯ ಥೀಟಾ ಡೈನಾಮಿಕ್ ಪ್ರೈ.ಲಿ.ನ ಚೀಫ್ ಎಕ್ಸಿಕ್ಯುಟೀವ್ ಆಫೀಸರ್ ಗಜೇಂದ್ರ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು. ಇಂಗ್ಲೀಷ್ ಚೆನ್ನಾಗಿ ಬರುವುದಿಲ್ಲವೆಂಬ ಕೀಳರಿಮೆ ಬೇಡ. ಎಷ್ಟೋ ದೇಶಗಳಲ್ಲಿ ಅವರ ಮಾತೃಭಾಷೆಯಲ್ಲಿಯೇ ಹೆಚ್ಚು ತಿಳಿದು ಉನ್ನತ ತಂತ್ರಜ್ಙಾನ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ ಎಂದರು. ಬೆಂಗಳೂರು ರೀಚ್ ಮಚ್ ಹೈಯರ್ ಚೀಫ್ ಅಡ್ವೈಸರ್ ಡಾ.ಒ.ಪಿ.ಗೋಯಲ್ ಮಾತನಾಡಿದರು. ಇದೇ ವೇಳೆ ಬ್ಯೂಟಿಷಿಯನ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಬ್ಯೂಟಿಷಿಯನ್ ಕಿಟ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕುಲಸಚಿವ (ಆಡಳಿತ) ಆರ್.ಲೋಕನಾಥ, ಪರೀಕ್ಷಾಂಗ ಕುಲಸಚಿವ ಡಾ.ಜಿ.ವಿ.ವೆಂಕಟರಮಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ