ಹೊನ್ನಾವರ: ಸುಳ್ಳು ಹೇಳುವುದು ಬಿಜೆಪಿ ಕೆಲಸ. ಜನಸಾಮಾನ್ಯರಿಗೆ ಮೋಸ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಉಪಸಭಾಧ್ಯಕ್ಷ ಮಂಕಾಳ ವೈದ್ಯ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆ, ಡಾ. ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸೇವಾಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಮಿಕರ ವಿವಿಧ ಸುರಕ್ಷತಾ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾರ್ಮಿಕರ ಇಲಾಖೆಯನ್ನು ಗಟ್ಟಿಗೊಳಿಸಿ ಕಾರ್ಮಿಕರಿಗೆ ಮೂಲ ಸೌಕರ್ಯವನ್ನು ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕಾರ್ಮಿಕರ ಕಿಟ್, 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪೆನ್ಶನ್ ನೀಡುತ್ತಿದ್ದೇವೆ. ಕಾರ್ಮಿಕರು ಸ್ವಾವಲಂಬನೆಯಿಂದ ಬದುಕುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲೆಯನ್ನು ಮಾಡುತ್ತಿದ್ದೇವೆ. ಇದೀಗ ನಮ್ಮ ಜಿಲ್ಲೆಯ ಶಾಲೆಗೆ ಭಟ್ಕಳದಲ್ಲಿ ₹38 ಕೋಟಿ ವೆಚ್ಚದಲ್ಲಿ ಜಾಗವನ್ನು ನೀಡಿ ಕಟ್ಟಡ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಕಾರ್ಮಿಕ ಮುಖಂಡ ಹರಿಶ್ಚಂದ್ರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‌ಶಿಪ್‌ನಲ್ಲಿ ಎಸ್ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿಯನ್ನು ಹಾಕಲು ಅನುವು ಮಾಡಿಕೊಡಬೇಕು. ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಾಗ ಸರ್ಕಾರದಿಂದ ನೇರವಾಗಿ ಆಸ್ಪತ್ರೆಗೆ ಹಣ ಸಂದಾಯ ಆಗುವಂತೆ ಮಾಡಬೇಕು. ಇಲ್ಲವಾದಲ್ಲಿ ಕಾರ್ಮಿಕರು ಮೊದಲು ಹಣವನ್ನು ಕಟ್ಟಿ ನಂತರ ಸರ್ಕಾರದಿಂದ ಹಣವನ್ನು ಪಡೆಯುವಾಗ ಸುಮಾರು ಸಮಯ ಕಳೆದಿರುತ್ತದೆ. ಅದರಲ್ಲೂ ಕೇವಲ ಶೇ. 40ರಷ್ಟು ಹಣ ಬರುತ್ತದೆ. ಇದನ್ನು ಸರಿಪಡಿಸಿದರೆ ಉತ್ತಮ ಎಂಬ ಮನವಿಯನ್ನು ಸಲ್ಲಿಸಿದರು.
ತಹಸೀಲ್ದಾರ್ ಪ್ರವೀಣ್ ಕರಾಂಡೆ, ತಾಲೂಕು ಪಂಚಾಯಿತಿ ಸಿಇಒ ಪುಟ್ಟೇಗೌಡ, ತಿಲಕ್ ಗೌಡ, ಗೋವಿಂದ ನಾಯ್ಕ, ಮಂಜುನಾಥ್ ಗೌಡ, ನಾರಾಯಣ ಗೌಡ, ಕುಮಾರ್ ಎಂ. ಗಣಿ, ಪುರಂದರ್ ನಾಯ್ಕ ಉಪಸ್ಥಿತರಿದ್ದರು. ಸುದೀಶ್ ನಾಯ್ಕ ನಿರೂಪಿಸಿದರು.