ಎತ್ತುಗಳಿಗೆ ಕುಡಿವ ನೀರಿಲ್ಲದೆ ಖಾಲಿ ಬಕೆಟ್‌ ಪ್ರದರ್ಶನ

KannadaprabhaNewsNetwork |  
Published : Aug 01, 2026, 01:15 AM IST
31ಕೆಆರ್ ಎಂಎನ್ 1.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕಾರ್ಯಕರ್ತರು  | Kannada Prabha

ಸಾರಾಂಶ

ರಾಮನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ನಂತೆ 15 ದಿನ ಒಟ್ಟು 4 ಟಿಎಂಸಿ ನೀರು ಹರಿಸುವಂತೆ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಎತ್ತುಗಳಿಗೆ ಕುಡಿಸಲು ನೀರಿಲ್ಲ ಎಂದು ಖಾಲಿ ಬಕೆಟ್ ಪ್ರದರ್ಶಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು

ರಾಮನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ನಂತೆ 15 ದಿನ ಒಟ್ಟು 4 ಟಿಎಂಸಿ ನೀರು ಹರಿಸುವಂತೆ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಎತ್ತುಗಳಿಗೆ ಕುಡಿಸಲು ನೀರಿಲ್ಲ ಎಂದು ಖಾಲಿ ಬಕೆಟ್ ಪ್ರದರ್ಶಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಎತ್ತುಗಳಿಗೆ ಕುಡಿಸಲು ನೀರಿಲ್ಲ. ತಮಿಳುನಾಡಿಗೆ ಎಲ್ಲಿಂದ ನೀರು ಕೊಡಲು ಸಾಧ್ಯವೆಂದು ಖಾಲಿ ಬಕೆಟ್ ಗಳನ್ನು ಪ್ರದರ್ಶಿಸಿದರು. ಅಲ್ಲದೆ, ತಮಿಳುನಾಡು, ಕರ್ನಾಟಕ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಕಾವೇರಿ ನೀರಿನ ಉಳಿವಿಗಾಗಿ ಎಂತಹ ಹೋರಾಟಕ್ಕಾದರೂ ಸಂಘಟನೆ ಸಿದ್ಧವಾಗಿದೆ. ಪ್ರತಿ ವರ್ಷ ಮಳೆ ಅಭಾವ ಉಂಟಾದಾಗಲೆಲ್ಲ ತಮಿಳುನಾಡು ಖ್ಯಾತೆ ತೆಗೆದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೂಲಕ ಕಾವೇರಿ ನದಿ ನೀರು ಹರಿಸುವಂತೆ ಆದೇಶ ಮಾಡಿಸಿಕೊಳ್ಳುತ್ತದೆ. ನಾಡಿನ ಜನರು ಕುಡಿಯಲು ನೀರು ಕೇಳುತ್ತಿದ್ದರೆ, ತಮಿಳುನಾಡು ಬೆಳೆಗಳಿಗಾಗಿ ನೀರು ಕೇಳುತ್ತಿದೆ ಎಂದು ಕಿಡಿಕಾರಿದರು.

ಕಾವೇರಿ ನದಿ ನೀರಿಗಾಗಿ ಶಾಸಕರು ಮತ್ತು ಸಂಸದರು ಪಕ್ಷ ಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಕರ್ನಾಟಕಕ್ಕೆ ವಿರುದ್ಧವಾದ ತೀರ್ಪು ಬಂದರೆ ದಿ.ಅಂಬರೀಶ್ ಅವರಂತೆ ಸಂಸದರು ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಬೇಕು. ಕಾವೇರಿ ನೀರಿನ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡಿದರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಎಚ್ಚರಿಸಿದರು.

ಪ್ರಾಧಿಕಾರದ ಆದೇಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಪಾಲನೆ ಮಾಡದೆ ಧಿಕ್ಕರಿಸಬೇಕು. ದಿವಂಗತ ಬಂಗಾರಪ್ಪ ಅವರಂತೆ ಡಿ.ಕೆ.ಶಿವಕುಮಾರ್ ಸುಗ್ರೀವಾಜ್ಞೆ ಹೊರಡಿಸಬೇಕು. ಈ ಕೂಡಲೇ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯವರೇ ಆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಜನರು, ರೈತರನ್ನು ಬಿಟ್ಟು ತಮಿಳುನಾಡನ್ನು ಮೆಚ್ಚಿಸುವ ಕೆಲಸ ಮಾಡಬೇಡಿ. ನಮ್ಮಲ್ಲಿ ಕುಡಿಯುವ ನೀರಿಲ್ಲ, ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ. ಕಾನೂನು ಸಂಕಷ್ಟ ಎದುರಾದರೂ ತಮಿಳುನಾಡಿನ ಒತ್ತಡಕ್ಕೆ ಮಣಿಯದೆ ರೈತರ ಹಿತ ಕಾಪಾಡುವುದು ಮುಖ್ಯ ಧ್ಯೇಯ ಆಗಬೇಕು ಎಂದು ಶಿವುಗೌಡ ಒತ್ತಾಯಿಸಿದರು.

ತಮಿಳುನಾಡು ಪರ ಕೆಲಸ ಮಾಡಲಷ್ಟೇ ಸೀಮಿತ:

ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಬಸವರಾಜ ಮಾತನಾಡಿ, ರಾಜ್ಯಸರ್ಕಾರ ಜಲಾಶಯಗಳಲ್ಲಿರುವ ನೀರನ್ನು ಬೆಳೆಗಳಿಗೆ ಹರಿಸದೆ, ಕುಡಿಯುವ ಸಂಗ್ರಹಿದೆ. ಪ್ರಾಧಿಕಾರದ ಆದೇಶ ಪಾಲಿಸಿದರೆ ಕುಡಿಯುವುದಕ್ಕೂ ನೀರಿಲ್ಲದಂತಾಗುತ್ತದೆ. ಮಳೆ ಇಲ್ಲದಿರುವ ಸಂದರ್ಭದಲ್ಲಿ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಅವಲೋಕಿಸದೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಹೊರಡಿಸಿರುವುದು ಖಂಡನೀಯ. ಕರ್ನಾಟಕದ ಪರ ಯಾವಾಗಲೂ ನಿಲ್ಲದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಪರವಾಗಿ ಕೆಲಸ ಮಾಡಲಷ್ಟೇ ಸೀಮಿತವಾಗಿದೆ ಎಂದು ಹರಿಹಾಯ್ದರು.

ಸಂಘಟನೆ ಜಿಲ್ಲಾಧ್ಯಕ್ಷ ಕಿರಣ್ ಗೌಡ ಮಾತನಾಡಿ, ಈ ವರ್ಷ ಮಳೆ ಕೈಕೊಟ್ಟಿದೆ. ಕೊಡಗಿನಲ್ಲಿಯೂ ಮಳೆ ಇಲ್ಲದೆ ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾವೇರಿ ಪ್ರಾಧಿಕಾರದಿಂದ ತಮಿಳುನಾಡಿಗೆ 3500 ಕ್ಯುಸೆಕ್ ನೀರನ್ನು 15 ದಿನಗಳವರೆಗೆ ಹರಿಸುವಂತೆ ಆದೇಶಿಸಿ ತಮಿಳುನಾಡಿನ ಪರ ಕೆಲಸ ಮಾಡಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ವಿನಯ್, ಜಂಟಿ ಕಾರ್ಯದರ್ಶಿ ರಮೇಶ್, ಯುವ ಜಿಲ್ಲಾಧ್ಯಕ್ಷ ಸ್ವಾಮಿ, ತಾಲೂಕು ಅಧ್ಯಕ್ಷ ರಾಜೀವ್, ಹೋಟಲ್ ಘಟಕದ ಅಧ್ಯಕ್ಷ ಮನು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅದ್ದೂರಿ ಲಿಂಗೇಶ್, ವಾಸು, ರಘು, ಪ್ರತಾಪ, ವೇಣು, ಮೈಯೂರ, ಲಕ್ಕು, ಸ್ವಾಮಿ, ತರುಣ, ಸೂರ್ಯ‌, ಪ್ರಶಾಂತ್, ಅಭಿ, ನರಸಿಂಹ, ಸುಪ್ರೀತ್, ಕಿಶೋರ್, ರೋಹನ್, ರಾಜ, ಶ್ರೀನಿವಾಸ, ಪುನೀತ, ಸಿ.ಸ್ವಾಮಿ, ಆಟೋ ರಾಮಣ್ಣ, ಶಶಿ, ಬಾಬು, ಪ್ರಮೋದ್ ,ಚಿದಾನಂದ, ಹರೀಶ, ಶಿವು, ವೆಂಕಟೇಶ್ ನಿಂಗರಾಜು ಮತ್ತಿತರರು ಭಾಗವಹಿಸಿದ್ದರು.

31ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕಾರ್ಯಕರ್ತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಎತ್ತುಗಳಿಗೆ ಕುಡಿವ ನೀರಿಲ್ಲವೆಂದು ಬಕೆಟ್ ಪ್ರದರ್ಶಿಸಿ ವಿನೂತನ ಪ್ರತಿಭಟನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಡ್ರೋನ್ ಪ್ರಯೋಗಾಲಯ
ತಮಿಳುನಾಡಿಗೆ ನೀರು ಹರಿಸುವುದು ಬೇಡ