ನಿಮ್ಮ ಮಗು ಓದುತ್ತಿರುವ ಶಾಲೆಗೆ ಮಾನ್ಯತೆ ಇದೆಯೇ?

Published : Jul 31, 2026, 12:51 PM IST
School

ಸಾರಾಂಶ

2026-27ನೇ ಶೈಕ್ಷಣಿಕ ಸಾಲು ಆರಂಭವಾಗಿ ಎರಡು ತಿಂಗಳಾದರೂ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಮಾತ್ರ ಇನ್ನೂ 2025-26ನೇ ಸಾಲಿನ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆ  ಪೂರ್ಣಗೊಳಿಸಿಲ್ಲ. ಬದಲಿಗೆ ಎಂಟತ್ತು ಬಾರಿ ಕಾಲಾವಕಾಶ ವಿಸ್ತರಿಸುತ್ತಾ ಮಾನ್ಯತೆ ನವೀಕರಣಕ್ಕಾಗಿ ಖಾಸಗಿ ಶಾಲೆಗಳನ್ನು ಬೇಡಿಕೊಳ್ಳುತ್ತಲೇ ಇದೆ

 ಲಿಂಗರಾಜು ಕೋರಾ

 ಬೆಂಗಳೂರು :  2026-27ನೇ ಶೈಕ್ಷಣಿಕ ಸಾಲು ಆರಂಭವಾಗಿ ಎರಡು ತಿಂಗಳಾದರೂ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಮಾತ್ರ ಇನ್ನೂ 2025-26ನೇ ಸಾಲಿನ ಶಾಲಾ ಮಾನ್ಯತೆ/ನವೀಕರಣ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ. ಬದಲಿಗೆ ಎಂಟತ್ತು ಬಾರಿ ಕಾಲಾವಕಾಶ ವಿಸ್ತರಿಸುತ್ತಾ ಮಾನ್ಯತೆ ನವೀಕರಣಕ್ಕಾಗಿ ಖಾಸಗಿ ಶಾಲೆಗಳನ್ನು ಬೇಡಿಕೊಳ್ಳುತ್ತಲೇ ಇದೆ.

ಶಿಕ್ಷಣ ಕಾಯ್ದೆ ಮತ್ತು ನಿಯಮಗಳನುಸಾರ ಶಾಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಶಾಲೆಗಳು ಆಯಾ ಶೈಕ್ಷಣಿಕ ಅವಧಿಯಲ್ಲಿ ಮಾನ್ಯತೆ ನವೀಕರಿಸಿಕೊಳ್ಳುವುದು ಕಡ್ಡಾಯ ಎಂದು ಹೇಳುವ ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಕಾಯ್ದೆ, ನಿಯಮಗಳನ್ನು ತಾವೇ ಅನುಸರಿಸದೆ ಇರುವುದು ವಿಪರ್ಯಾಸವೇ ಸರಿ. ಇನ್ನು ಹಿಂದಿನ ಸಾಲಿನ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಇಲಾಖೆ ಪ್ರಸಕ್ತ ಸಾಲಿನ ಪ್ರಕ್ರಿಯೆ ಯಾವಾಗ ಆರಂಭಿಸುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಕಳೆದ ಕೆಲವು ವರ್ಷಗಳ ಪ್ರಕ್ರಿಯೆ ಅವಲೋಕಿಸಿದರೆ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಾ ಬಂದಾಗ ಅಥವಾ ಪರೀಕ್ಷೆ ಹತ್ತಿರವಾದರೂ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲವಾದ ಖಾಸಗಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲ ದಾಖಲೆಗಳನ್ನು ಒದಗಿಸುವ ಷರತ್ತಿಗೊಳಪಟ್ಟು ಚಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆಸಿಕೊಂಡು ಸರ್ಕಾರ ಮಾನ್ಯತೆ ನವೀಕರಿಸಿಕೊಂಡು ಬಂದಿತ್ತು. ಇದು ನಿಯಮ ಬಾಹಿರ ಎಂದು ಹೈಕೋರ್ಟ್‌ ಬ್ರೇಕ್‌ ಹಾಕಿದ ಬಳಿಕ ಇಲಾಖೆಯ ಅಧಿಕಾರಿಗಳು ಮಾನ್ಯತೆ ನವೀಕರಣ ನಿರಂತರ ಪ್ರಕ್ರಿಯೆ ಎಂಬ ಸಬೂಬು ಹೇಳಿಕೊಂಡು ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಹಳೆಯ ವರ್ಷದ ಮಾನ್ಯತೆ ನವೀಕರಣ ಪ್ರಕ್ರಿಯೆ ಮುಗಿಸದೆ ಅರ್ಜಿ ಸಲ್ಲಿಕೆಗೆ ವಿಸ್ತರಿಸಿಕೊಂಡು ಹೋಗುತ್ತಿದ್ದಾರೆ.

ಕಾನೂನಾತ್ಮಕವಾಗಿ ಕಾಲಮಿತಿಯಲ್ಲಿ ಆಯಾ ವರ್ಷದ ಶಾಲಾ ಮಾನ್ಯತೆ/ನವೀಕರಣ ಪ್ರಕ್ರಿಯೆ ನಡೆಸಿ ರಾಜ್ಯದಲ್ಲಿರುವ ಅಧಿಕೃತ, ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಅನುಕೂಲ ಮಾಡಿಕೊಡುತ್ತಲೇ ಹೋಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

10 ಬಾರಿ ಕಾಲಾವಕಾಶ ವಿಸ್ತರಣೆ:

ಮಾನ್ಯತೆ ನವೀಕರಣಕ್ಕೆ ಬೇಕಾದ ದಾಖಲೆಗಳನ್ನು ಒದಗಿಸುವುದು ಕಷ್ಟದಾಯಕ, ಮಾನದಂಡ ಹಾಗೂ ಪ್ರಕ್ರಿಯೆ ಸರಳೀಕರಿಸಬೇಕೆಂಬ ಖಾಸಗಿ ಶಾಲೆಗಳ ಬೇಡಿಕೆಗೆ ಮಣಿದ ಸರ್ಕಾರ ಈ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಿದೆ. ಶಾಲೆಯ ಟ್ರಸ್ಟ್‌ನ ನೋಂದಣಿ ಪತ್ರ, ಮೊದಲ ಮಾನ್ಯತಾ ಪತ್ರ, ಪ್ರತೀ ವರ್ಷದ ನವೀಕರಣ ಪತ್ರ, ಕಟ್ಟಡ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ 30ಕ್ಕೂ ಹೆಚ್ಚು ದಾಖಲೆಗಳನ್ನು ಮಾನ್ಯತೆ ನವೀಕರಣಕ್ಕೆ ಸಲ್ಲಿಸಬೇಕಿತ್ತು. ಇದನ್ನು ಕೇವಲ 16ಕ್ಕೆ ಇಳಿಸಲಾಗಿದೆ.

ಭ್ರಷ್ಟಾಚಾರ ಆರೋಪ ಬಂದಿದ್ದರಿಂದ ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವನ್ನು ಆಯಾ ಇಲಾಖೆಯಿಂದಲೇ ನೇರವಾಗಿ ಒದಗಿಸುವ ಅವಕಾಶ ಕಲ್ಪಿಸಲಾಗಿದೆ. 2025ರ ಅಕ್ಟೋಬರ್‌ನಿಂದ ಇದುವರೆಗೆ ಎಂಟಕ್ಕೂ ಹೆಚ್ಚು ಬಾರಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಿಸಲಾಗಿದೆ. ಇದೀಗ ಜು.31ರವರೆಗೆ ಮತ್ತೊಮ್ಮೆ ಅಂತಿಮ ಅವಕಾಶ ನೀಡಲಾಗಿದೆ. ಪ್ರತೀ ಬಾರಿಯೂ ಇದು ಕೊನೆಯ ಅವಕಾಶ ಎಂದು ಇಲಾಖೆ ಎಚ್ಚರಿಸಿದರೂ ಖಾಸಗಿ ಶಾಲೆಗಳು ಮಾನ್ಯತೆ ನವೀಕರಿಸಿಕೊಳ್ಳುತ್ತಿಲ್ಲ. ಇನ್ನು, ಅಂತಹ ಶಾಲೆಗಳನ್ನು ಮುಲಾಜಿಲ್ಲದೆ ಅನಧಿಕೃತ ಎಂದು ಘೋಷಿಸುವ ಧೈರ್ಯವನ್ನೂ ತೋರದೆ ಅಧಿಕಾರಿಗಳು ಅದ್ಯಾವ ಮರ್ಜಿನಿಂದ ಅಸಹಾಯಕರಾಗಿದ್ದಾರೋ ತಿಳಿಯುತ್ತಿಲ್ಲ. ಇದೆಲ್ಲವನ್ನೂ ನೋಡಿದಾಗ ರಾಜ್ಯದಲ್ಲಿ ಖಾಸಗಿ ಶಾಲೆಗಳ ಪ್ರಭಾವ ಎಷ್ಟರ ಮಟ್ಟಿಗೆ ಬೆಳೆದಿದೆ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.

ಖಾಸಗಿ ಶಾಲೆಗಳು ಅಧಿಕೃತವೋ ಅನಧಿಕೃತವೋ?

ಇನ್ನು, ಕಳೆದ ವರ್ಷದ ಮಾನ್ಯತೆ ನವೀಕರಣ ಪ್ರಕ್ರಿಯೆಯೇ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾನ್ಯತೆ ನವೀಕರಿಸಿಕೊಳ್ಳದ ಶಾಲೆಗಳು ಪ್ರಸಕ್ತ ಸಾಲಿನಲ್ಲಿ ಅಧಿಕೃತವೋ, ಅನಧಿಕೃತ ಶಾಲೆಗಳೋ ಎನ್ನುವ ಪ್ರಶ್ನೆ ಶುರುವಾಗಿದೆ. ಇದಕ್ಕೆ ಅಧಿಕಾರಿಗಳೇ ಉತ್ತರ ನೀಡಬೇಕು ಎನ್ನುವುದು ಪೋಷಕರ ವಲಯದಲ್ಲಿ ಕೇಳಿಬರುತ್ತಿರುವ ಆಗ್ರಹವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಕರೆಗೆ ಲಭ್ಯವಾಗಲಿಲ್ಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಬೇಷರತ್ ಬೆಂಬಲ: ಜಯಮಾಲ
ಕುಮಾರಸ್ವಾಮಿ ಎಚ್‌ಎಂಟಿ ವಾಚ್‌ನಲ್ಲಿ ತಾಯಿ ಪೋಟೋ