ಕೆರೆ, ಕಟ್ಟೆಗಳು ಖಾಲಿ, ನರಗುಂದ ತಾಲೂಕಲ್ಲಿ ಕುಡಿಯುವ ನೀರಿನ ಅಭಾವ

KannadaprabhaNewsNetwork |  
Published : Mar 02, 2024, 01:51 AM IST
1ಎನ್.ಆರ್.ಡಿ4 ನಿರ್ವಹಣೆ ಇಲ್ಲದೆ ತುಕ್ಕು ಹಿಡಿದ ಶುದ್ದ ಘಟಕಗಳು. | Kannada Prabha

ಸಾರಾಂಶ

ಪ್ರಸಕ್ತ ವಷ೯ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆಗಳು ಹಾನಿಯಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬಿರು ಬಿಸಿಲಿನಿಂದ ಕೆರೆ, ಕಟ್ಟೆಗಳು ಬರಿದಾಗಿದ್ದು, ಜಾನುವಾರುಗಳ ಜತೆಗೆ ಜನರಿಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ.

ಎಸ್‌.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಪ್ರಸಕ್ತ ವಷ೯ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆಗಳು ಹಾನಿಯಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬಿರು ಬಿಸಿಲಿನಿಂದ ಕೆರೆ, ಕಟ್ಟೆಗಳು ಬರಿದಾಗಿದ್ದು, ಜಾನುವಾರುಗಳ ಜತೆಗೆ ಜನರಿಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ.

ನರಗುಂದ ಪಟ್ಟಣ ಹಾಗೂ ತಾಲೂಕಿನ 13 ವಿವಿಧ ಗ್ರಾಪಂ ವ್ಯಾಪ್ತಿಯ 30 ಗ್ರಾಮ ಸೇರಿ ರೋಣ, ಗಜೇಂದ್ರಗಡ ತಾಲೂಕಿನ ಒಟ್ಟು 131 ಹಳ್ಳಿಗಳಿಗೆ ನವಿಲುತೀರ್ಥ ಜಲಾಶಯದಿಂದ ಪೈಪ್‌ಲೈನ್ ಮುಖಾಂತರ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. 63 ಕೋಟಿ ರು. ವೆಚ್ಚದ ಪ್ರಾಯೋಗಿಕ ಯೋಜನೆ 2019ರಲ್ಲಿ ಪ್ರಾರಂಭಿಸಲಾಯಿತು. ತಾಹಲ್ ಖಾಸಗಿ ಕಂಪನಿಗೆ ನೀರು ಪೂರೈಕೆಯ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ತಿಂಗಳು ನೀರಿಗಾಗಿ 25 ಲಕ್ಷ ರು. ಖರ್ಚು ಮಾಡುವುದರ ಜತೆಗೆ 6 ವರ್ಷದಿಂದ ವಿದ್ಯುತ್ ಬಿಲ್ ಪ್ರತ್ಯೇಕವಾಗಿ ಪಾವತಿಸಲಾಗುತ್ತಿದೆ. ಸಕಾಲಕ್ಕೆ ಮಳೆಯಾಗದೆ ಈ ಬಾರಿ ಕಾಲುವೆಗೆ ಸರಿಯಾಗಿ ನೀರು ಬಿಡುಗಡೆ ಮಾಡಲಿಲ್ಲ. ಇದರಿಂದ ಪಟ್ಟಣ ಹಾಗೂ ತಾಲೂಕಿನ ಹದಲಿ, ರಡ್ಡೇರನಾಗನೂರ, ಭೈರನಹಟ್ಟಿ, ಶಿರೋಳ, ಹುಣಸೀಕಟ್ಟಿ, ಚಿಕ್ಕನರಗುಂದ ಸೇರಿ ವಿವಿಧ 18 ಗ್ರಾಮಗಳ ಜನರಿಗೆ ತೀವ್ರ ನೀರಿನ ಸಮಸ್ಯೆ ಎದುರಾಗಿದೆ.ಶಿರೋಳದಲ್ಲಿನ ಬಹುಗ್ರಾಮಗಳ ಕುಡಿಯುವ ನೀರಿನ ಕೆರೆಯಲ್ಲಿ ನೀರು ಖಾಲಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ 6 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. 3 ಸಾವಿರ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್ ನೀರು ಹಳ್ಳಿಗಳಿಗೆ ಪೂರೈಸಲು 801 ರು. ದರದ ಟೆಂಡರ್ ಸಹ ನೀಡಲಾಗಿದೆ. ಪ್ರಾಣಿ, ಪಕ್ಷಿಗಳಿಗೆ ತಕ್ಷಣವೇ ನೀರು ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗೆ ಫೆ.13ರಂದು ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಹನಿ ನೀರೂ ಬಂದಿಲ್ಲ. ನವಿಲುತೀರ್ಥ ಜಲಾಶಯವು 2079.50 ಅಡಿ ನೀರು ಸಂಗ್ರಹದ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ ಜಲಾಶಯದಲ್ಲಿ 12 ಟಿಎಂಸಿ ಮಾತ್ರ ನೀರಿದೆ. ಮುಂದಿನ ದಿನ ಸಕಾಲಕ್ಕೆ ಮಳೆ ಸುರಿಯದಿದ್ದರೆ ಕುಡಿಯುವ ನೀರಿಗೂ ಸಂಕಷ್ಟ ತಪ್ಪಿದ್ದಲ್ಲ. ಶುದ್ಧ ನೀರಿನ ಘಟಕ ಬಂದ್‌: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 8, ತಾಲೂಕಿನ ವಿವಿಧ ಗ್ರಾಮಗಳಲ್ಲಿ 31 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಬಹುತೇಕ ಘಟಕಗಳು ಸಂಪೂರ್ಣ ಪಾಳು ಬಿದ್ದಿದ್ದು, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಆಗುತ್ತದೆ.

ಪ್ರಸಕ್ತ ವಷ೯ ಮಳೆ ಕೈ ಕೊಟ್ಟಿದ್ದರಿಂದ ಇಂದು ಜಾನುವಾರುಗಳು ನೀರಿನ ಅಭಾವ ತಲೆದೋರಿದೆ. ಕಾಲುವೆಗಳಿಗೆ ನೀರು ಹರಿಸಿ ಜಮೀನುಗಳ ಕೃಷಿ ಹೊಂಡ ತುಂಬಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಕುರಿಗಾರ ಸಂಗಪ್ಪ ಕಳಸದ ಹೇಳುತ್ತಾರೆ.

ಜಾನುವಾರುಗಳಿಗಾಗಿ ಕಾಲುವೆ ಮೂಲಕ ನೀರು ಬಿಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳಾಗಿದ್ದು, ಶೀಘ್ರದಲ್ಲಿಯೇ ನೀರು ಬರಬಹುದು. ಬರಗಾಲ ಕಾಮಗಾರಿಗಳ ಬಗ್ಗೆ ಜಿಲ್ಲಾ ಟಾಸ್ಕ್‌ ಫೋರ್ಸ್ ಸಮಿತಿ, ಸರ್ಕಾರದಿಂದ ನೀಡುವ ಎಲ್ಲ ಸಲಹೆ, ಸೂಚನೆ, ನಿರ್ದೇಶನಗಳಂತೆ ಆಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವೊಂದು ರೈತರಿಗೆ ಬರ ಪರಿಹಾರ ದೊರೆಯದಿದ್ದರೆ ಸಂಬಂಧಿಸಿ ಇಲಾಖೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳುತ್ತಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ