ಕಾರಟಗಿ: ತುಂಗಭದ್ರಾ ನದಿ ತೀರದ ಉಳೇನೂರು ಗ್ರಾಮದಲ್ಲಿನ ಮಹಿಳೆಯರು ಕುಡಿವ ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮದಲ್ಲಿ ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂದಿಂದ ನೀರು ಸರಬರಾಜು ಮಾಡಿದರೂ ಅರೆಬೆರೆಯಾಗಿದ್ದು, ಇದರಿಂದ ನಿತ್ಯ ಕರ್ಮ, ಕುಡಿಯಲು ಮತ್ತು ಬಟ್ಟೆ ಪಾತ್ರ ತೊಳೆಯದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ನೀರು ಎಲ್ಲಿಂದ ತರಬೇಕೆಂದು ಖಾಲಿ ಕೊಡ ಸಾಲು ಸಾಲು ಇಟ್ಟು ಮಹಿಳೆಯರು ಪ್ರತಿಭಟಿಸಿದರು.
ಕುಡಿವ ನೀರಿನ ಸಮಸ್ಯೆ ಕುರಿತು ಸ್ಥಳೀಯ ಪಂಚಾಯಿತಿಗೆ ದೂರ ನೀಡಿದ್ದರೂ ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲ, ಉಡಾಫೆ ಉತ್ತರ ನೀಡುತ್ತಾರೆ,ಇದರಿಂದ ನಾವು ಯಾರಿಗೆ ನೀರು ಕೇಳಬೇಕು ಎಂದು ತಮ್ಮ ಅಳಿಲು ತೋಡಿಕೊಂಡರು. ಗ್ರಾಮದಲ್ಲಿ ಬೋರ್‌ವೆಲ್ ಇರುವ ಮನೆಗಳಿಂದ ನೀರು ತಂದು ದಿನ ದೂಡುತಿದ್ದೇವೆ. ದನಕರು ಮೇಯಲು ಹೊರಗಡೆ ಹೋಗುತ್ತವೆ. ದಿನ ನಾವು ನೀರಿಗಾಗಿ ಅಲ್ಲಿ ಇಲ್ಲಿ ಅಲೆದಾಡಬೇಕಾಗಿದೆ. ಎಷ್ಟು ದಿನ ಹೇಗೆ ನಾವು ನೀರಿಗಾಗಿ ಅಲೆದಾಡಬೇಕು ಎಂದು ಮಹಿಳೆಯರು ಪ್ರಶ್ನಿಸಿದರು.ಈ ಹಿಂದೆ ಕುಡಿವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಗ್ರಾಪಂ ಸಿಬ್ಬಂದಿ ಕಚೇರಿಗೆ ಬೀಗ ಹಾಕಿಕೊಂಡು ಹೋದರು. ಇದರಿಂದ ಸಮಸ್ಯೆ ಇನ್ನೂ ಹೆಚ್ಚಾಗಿದೆ ಹೊರತು ಬಗೆಹರಿದಿಲ್ಲ. ಇನ್ನೇರಡು ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಶಾಸಕ ಶಿವರಾಜ ತಂಗಡಗಿ ನಿವಾಸದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.