ಬೊಕ್ಕಸ ಖಾಲಿ, ಯೋಜನೆ ಘೋಷಣೆಗಷ್ಟೆ ಸೀಮಿತ

KannadaprabhaNewsNetwork |  
Published : Oct 02, 2026, 02:30 AM IST
ಹಳದಿಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನ ನಡೆಯಿತು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸರ್ಕಾರದ ಈ ನಿರ್ಧಾರ ಬಡವರ ಪಾಲಿಗೆ ಮರಣಶಾಸನವಾಗಿದೆ. ಮನೆಗಳಿಗೆ ನಂಬರ್ ರದ್ದುಪಡಿಸಿದರೆ ಹೊಸ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಪಡಿತರ ಚೀಟಿ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.

ಹೊನ್ನಾವರ: ಕಂದಾಯ, ಅರಣ್ಯ ಹಾಗೂ ಸರ್ಕಾರಿ ಒಡೆತನದ ಜಾಗಗಳಲ್ಲಿ ನಿರ್ಮಿಸಲಾದ ಮನೆಗಳ ಕರ ಆಕರಣೆಯನ್ನು ಸ್ಥಗಿತಗೊಳಿಸುವಂತೆ ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶವನ್ನು ವಿರೋಧಿಸಿ, ಹೊನ್ನಾವರ ಮಂಡಲ ಬಿಜೆಪಿ ವತಿಯಿಂದ ಹಳದಿಪುರ ಗ್ರಾಪಂ ಆವರಣದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನ ನಡೆಯಿತು. ಬಳಿಕ ಪಿಡಿಒ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಹೊನ್ನಾವರ ಮಂಡಲ ಅಧ್ಯಕ್ಷ ಯೋಗೇಶ್ ಮೇಸ್ತ, ಬಡ ಜನರು ಕಷ್ಟಪಟ್ಟು ತಮ್ಮ ಸ್ವಂತ ಸೂರು ಕಟ್ಟಿಕೊಂಡಿದ್ದಾರೆ. ಸರ್ಕಾರಿ ಭೂಮಿಯಲ್ಲಿರುವ ವಸತಿಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವಂತೆ ಹೊರಡಿಸಿರುವ ಆದೇಶವು ಬಡವರನ್ನು ಮೂಲಸೌಕರ್ಯಗಳಿಂದ ವಂಚಿತರನ್ನಾಗಿಸುವ ಹುನ್ನಾರವಾಗಿದೆ. ರಾಜ್ಯ ಸರ್ಕಾರ ಬೊಕ್ಕಸ ಖಾಲಿ ಮಾಡಿಕೊಂಡು ಕೇವಲ ಯೋಜನೆಗಳ ಘೋಷಣೆಗಷ್ಟೇ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಸರ್ಕಾರದ ಈ ನಿರ್ಧಾರ ಬಡವರ ಪಾಲಿಗೆ ಮರಣಶಾಸನವಾಗಿದೆ. ಮನೆಗಳಿಗೆ ನಂಬರ್ ರದ್ದುಪಡಿಸಿದರೆ ಹೊಸ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಪಡಿತರ ಚೀಟಿ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ. ಅಷ್ಟೇ ಅಲ್ಲದೆ, ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನೂ ಜನತೆ ಕಳೆದುಕೊಳ್ಳಬೇಕಾಗುತ್ತದೆ. ತಲೆತಲಾಂತರಗಳಿಂದ, ಮೂರು ದಶಕಗಳಿಂದ ನೆಲೆಸಿರುವ ನಾಗರಿಕರನ್ನು ಬೀದಿಗೆ ತಳ್ಳಲು ಮುಂದಾಗಿರುವ ಸರ್ಕಾರ, ಅಕ್ರಮ ನುಸುಳುಕೋರರಿಗೆ ಮಣೆ ಹಾಕುತ್ತಿದೆ. ಈ ಆದೇಶವನ್ನು ತಕ್ಷಣವೇ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷ್ಣ ಜೋಶಿ ಮಾತನಾಡಿ, ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರುವ ರಾಜ್ಯ ಸರ್ಕಾರ, ಜನಸಾಮಾನ್ಯರಿಗೆ ನಿರಂತರ ಅನ್ಯಾಯವೆಸಗುತ್ತಿದೆ. ಕೇಂದ್ರದ ‘ಪಿಎಂ ಕಿಸಾನ್’ ಹಣ ಫಲಾನುಭವಿಗಳ ಖಾತೆಗೆ ಸರಿಯಾದ ಸಮಯಕ್ಕೆ ಜಮೆಯಾಗುತ್ತಿದ್ದರೆ, ರಾಜ್ಯದ ‘ಗೃಹಲಕ್ಷ್ಮಿ’ ಕಂತುಗಳು ಬಾಕಿ ಉಳಿದಿವೆ. ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಪಿಎಂ ಕಿಸಾನ್ ಯೋಜನೆಗೆ ರಾಜ್ಯದಿಂದ ₹4,000 ಹೆಚ್ಚುವರಿಯಾಗಿ ನೀಡಿದ್ದರು ಹಾಗೂ ಬಸವರಾಜ ಬೊಮ್ಮಾಯಿ ಅವರು ರೈತ ವಿದ್ಯಾನಿಧಿ ಜಾರಿಗೆ ತಂದಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಅವೆರಡನ್ನೂ ರದ್ದುಪಡಿಸಿದ ಕಾಂಗ್ರೆಸ್ ಸರ್ಕಾರ, ಈಗ ಬಡವರ ಸೂರು ಕಸಿಯಲು ಮುಂದಾಗಿದೆ. ಈ ಆದೇಶವನ್ನು ವಾಪಸ್ ಪಡೆಯದಿದ್ದರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟ್ಟ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ
ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ