ಕನ್ನಡಪ್ರಭ ವಾರ್ತೆ ಬೀಳಗಿ
ಕುರಿಗಾಹಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಕುರಿ ಮೇಯಿಸಿ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಕುರಿಗಾಹಿಗಳಿಗಾಗಿ ಮುಂಬರುವ ಅಧಿವೇಶನದಲ್ಲಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ವತಿಯಿಂದ ಕುರಿಗಾಹಿಗಳಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಕುರಿಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿ ಸದಸ್ಯರು, ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ಅರಣ್ಯದ ಅಂಚಿನಲ್ಲಿ ಕುರಿ ಮೇಯಿಸಲು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಕಾಶ ನೀಡದೆ ದೌರ್ಜನ್ಯ ಎಸುಗುತ್ತಿದ್ದಾರೆ. ಕುರಿಗಾಹಿಗಳು ವ್ಯಾಪಾರಸ್ಥರು ಅಲ್ಲ. ಮರ ಕಡಿದು ಮಾರಾಟ ಮಾಡುವವರು ಅಲ್ಲ. ದೇಶದ ಗಡಿ ಭಾಗದಲ್ಲಿ ಯುದ್ಧದ ಮುನ್ಸೂಚನೆ ನೀಡುವಂತಹವರು, ಅರಣ್ಯದೊಂದಿಗೆ, ಗುಡ್ಡಗಾಡಿನಲ್ಲಿ ಬದುಕುವ ಕುರಿಗಾಹಿಗಳು ಅರಣ್ಯ ಸಂಪತ್ತಿನ ರಕ್ಷಕರು. ಅರಣ್ಯದ ಆಗುಹೋಗುಗಳ ಬಗ್ಗೆ ನಿಗಾ ವಹಿಸುವ ನಮ್ಮ ಕುರಿಗಾಯಿಗಳಿಗೆ ತೊಂದರೆ ನೀಡುತ್ತಿರುವ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡು ಈ ಹಿಂದಿನಂತೆಯೆ ಅರಣ್ಯ ಅಂಚಿನಲ್ಲಿ ಕುರಿ ಮೇಯಿಸೋಕೆ ತೊಂದರೆ ನೀಡಬಾರದೆಂದು ತಿಳಿಸಿದರು.ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರು ಕಚೇರಿಯಲ್ಲಿ ಕುರಿಗಾಹಿಗಳು ಅರಣ್ಯ ಅಧಿಕಾರಿ ಮತ್ತು ಪಶುವೈದ್ಯಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿ, ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯ ಇಲಾಖೆ ಹಾಗೂ ಕುರಿಗಾಹಿಗಳು ನಡುವೆ ಸಹಭಾಗಿತ್ವದಿಂದ ಇರಬೇಕು. ಕುರಿಗಾಹಿಗಳು ಅರಣ್ಯ ರಕ್ಷಣೆ ಜೊತೆಗೆ ತಮ್ಮ ಜೀವನೋಪಾಯ ಸಂರಕ್ಷಣೆ ಮಾಡಿಕೊಳ್ಳಬೇಕು. ಮೂರು ದಿನದ ವರೆಗೆ ಅರಣ್ಯ ಅಧಿಕಾರಿಗಳು ಕಾಲಾವಕಾಶ ಕೇಳಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಹಾಲುಮತ ಸಮಾಜದ ರಾಜ್ಯ ಕಾರ್ಯದರ್ಶಿ ಸುವರ್ಣ ನಾಗರಾಳ, ಹೋರಾಟಗಾರರಾದ ಸಿದ್ದಪ್ಪ ಬಳಗಾನೂರ, ಯಲ್ಲಪ್ಪ ಹೆಗಡೆ, ಬಿ ಎಸ್ ಗೋನಾಳ, ಪರಶುರಾಮ ಮಂಟೂರ,ಭರಮಪ್ಪ ಗುಳಬಾಳ, ಸಿದ್ದಪ್ಪ ಪೂಜಾರಿ,ಶೇಖರ ಪಂಡರಿ ಸೇರಿದಂತೆ ಇತರರು ಇದ್ದರು.