ಶಿವಮೊಗ್ಗ: ಗಂಭೀರ ಅಸ್ವಸ್ಥೆಯಾಗಿದ್ದ ಯುವತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಏರ್‌ಲಿಫ್ಟ್ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೆದುಳು ಜ್ವರದಿಂದ ಬಳಲುತ್ತಿದ್ದ ಮಾನ್ಯ(22) ಎಂಬ ಯುವತಿಯನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ಕಳುಹಿಸಿ ಕೊಡಲಾಯಿತು.ಶಿವಮೊಗ್ಗದ ಗಾಂಧಿ ಬಜಾರ್‌ನ ತಿಮ್ಮಪ್ಪ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಮಾನ್ಯ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಇವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಮುಂಬೈಗೆ ರವಾನಿಸಲು ನಿರ್ಧರಿಸಲಾಯಿತು.
ಯುವತಿಯನ್ನು ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಿಸಲು ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಹಕಾರ ನೀಡಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಂಜಪ್ಪ ಆಸ್ಪತ್ರೆಯ ಐಸಿಯು ಕೇರ್ ವೈದ್ಯ ಡಾ.ರಾಕೇಶ್ ಅವರು, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಶಿವಮೊಗ್ಗಕ್ಕೆ ಬಂದ ನಂತರ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಅಮೃತ್ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದಾಗ ಅವರಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿತ್ತು. ಅಮೃತ್ ಲೈಫ್‌ಲೈನ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಮಾನ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ನಮ್ಮ ಆಸ್ಪತ್ರೆಗೆ ದಾಖಲಿಸಲಾಯಿತು.
ಆ ಯುವತಿಗೆ ಜ್ವರದ ತೀವ್ರತೆ ಹೆಚ್ಚಾಗಿ ಲಿವರ್ ಸಮಸ್ಯೆ ಇರುವುದು ನಮಗೆ ತಿಳಿದು ಬಂದಿತು. ವೈದ್ಯಕೀಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ, ಮಾನ್ಯ ಅವರಿಗೆ ತಕ್ಷಣವೇ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದ್ದು, ಅದಕ್ಕಾಗಿ ಅವರನ್ನು ಮುಂಬೈಗೆ ಏರ್‌ಲಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.