ಯೂರಿಯಾಗೆ ಸಾಲುಗಟ್ಟಿ ನಿಂತ ಕೃಷಿಕರು

KannadaprabhaNewsNetwork |  
Published : Jul 27, 2025, 01:51 AM IST
ಚಿತ್ರ:ನಗರದ ಎಪಿಎಂಸಿ ಆವರಣದ ರಸ್ತೆಯಲ್ಲಿ ಸಾಲುಗಟ್ಟಿ ಯೂರಿಯಾ ಗೊಬ್ಬರಕ್ಕೆ ಕಾದು ನಿಂತಿದ್ದ ರೈತರು ಮತ್ತು ರೈತ ಮಹಿಳೆಯರು. | Kannada Prabha

ಸಾರಾಂಶ

ಜಿಲ್ಲೆಯ ವಿವಿದೆಡೆ ಸಮೃದ್ಧ ಮಳೆಯಾಗುತ್ತಿದ್ದು, ಕೃಷಿಕರು ತಮ್ಮ ಬೆಳೆಗಳಿಗೆ ಬೇಕಾದ ಯೂರಿಯಾ ರಸಗೊಬ್ಬರ ಪಡೆಯಲು ಬೆಳಿಗ್ಗೆಯಿಂದಲೇ ಎಪಿಎಂಸಿ ಆವರಣ ಸಮೀಪ ಸಾವಿರಾರು ರೈತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಕೃಷಿಕರ ಈ ಸರದಿಯ ಸಾಲು ಮುಕ್ಕಾಲು ಕಿ.ಮೀ. ದೂರದವರೆಗೂ ಇದ್ದುದು ಯೂರಿಯಾ ಗೊಬ್ಬರಕ್ಕೆ ಇರುವ ಬೇಡಿಕೆಯನ್ನು ಸೂಚಿಸುವಂತಿತ್ತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ವಿವಿದೆಡೆ ಸಮೃದ್ಧ ಮಳೆಯಾಗುತ್ತಿದ್ದು, ಕೃಷಿಕರು ತಮ್ಮ ಬೆಳೆಗಳಿಗೆ ಬೇಕಾದ ಯೂರಿಯಾ ರಸಗೊಬ್ಬರ ಪಡೆಯಲು ಬೆಳಿಗ್ಗೆಯಿಂದಲೇ ಎಪಿಎಂಸಿ ಆವರಣ ಸಮೀಪ ಸಾವಿರಾರು ರೈತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಕೃಷಿಕರ ಈ ಸರದಿಯ ಸಾಲು ಮುಕ್ಕಾಲು ಕಿ.ಮೀ. ದೂರದವರೆಗೂ ಇದ್ದುದು ಯೂರಿಯಾ ಗೊಬ್ಬರಕ್ಕೆ ಇರುವ ಬೇಡಿಕೆಯನ್ನು ಸೂಚಿಸುವಂತಿತ್ತು.

ಮನೆಯಲ್ಲಿ ಕೆಲಸ ನಿರ್ವಹಿಸಿ ಸಂಸಾರದ ಬಂಡಿ ಸಾಗಿಸಬೇಕಾದ ಮಹಿಳೆಯರೂ ಅಚ್ಚರಿಯೆಂಬಂತೆ ಸರದಿ ಸಾಲುಗಳಲ್ಲಿ ಅಗತ್ಯ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದುದು ನಮ್ಮ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಿತ್ತು.

ರೈತರು ಲಗ್ಗೆ ಇಟ್ಟಿದ್ದರಿಂದ ಎಪಿಎಂಸಿ ಮಾರುಕಟ್ಟೆಯ ಕಡೆಗೆ ಹೋಗುತ್ತಿದ್ದ ರಸ್ತೆಗಳನ್ನು ಪೊಲೀಸರು ಕೆಲ ಹೊತ್ತು ಬಂದ್‌ ಮಾಡಿದ್ದರು.

ರೈತರು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಬಹುದೆಂದು ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಗೊಬ್ಬರ ಪಡೆದ ನಂತರ ರೈತರು ಎರಡು ಚೀಲ ಯಾವುದಕ್ಕೆ ಸಾಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧವೂ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಆರ್.ಬಿ. ನಿಜಲಿಂಗಪ್ಪ ಮಾತನಾಡಿ, ಜಿಲ್ಲೆಯ ಹಲವೆಡೆ ವಾರದಿಂದ ಉತ್ತಮ ಮಳೆಯಾಗುತ್ತಿದೆ. ಯೂರಿಯಾ, ಡಿಎಪಿ ಗೊಬ್ಬರವಿಲ್ಲದೆ ಬೇಸಾಯ ಕೈಗೊಳ್ಳಲು ಹೇಗೆ ಸಾಧ್ಯ. ಮುಂದೆ ರೈತಾಕ್ರೋಶ ಉಂಟಾದಲ್ಲಿ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ಜಿಲ್ಲೆಯ ರೈತರು ಸತತ ಬರಕ್ಕೆ ನಲುಗಿ ಜಾನುವಾರು ಮಾರಿಕೊಂಡು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರದಿಂದ ವಿತರಿಸುವ ಗೊಬ್ಬರವನ್ನೇ ನಂಬಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗೊಬ್ಬರ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಏಪ್ರಿಲ್, ಮೇ ತಿಂಗಳಲ್ಲೇ ಮನವಿ ಸಲ್ಲಿಸಲಾಗಿತ್ತು. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ನೂರಾರು ರೈತ ಮಹಿಳೆಯರು ಗೊಬ್ಬರಕ್ಕಾಗಿ ಕಾಯುವಂತಾಗಿದೆ. ಇದು ಮರುಕಳಿಸಬಾರದು. ಕೂಡಲೇ ಜಿಲ್ಲೆಯ ಗೊಬ್ಬರದ ಎಲ್ಲ ಸೊಸೈಟಿಗಳಿಗೂ ಸಮರ್ಪಕವಾಗಿ ದಾಸ್ತಾನು ಮಾಡಬೇಕು. ನಿಗದಿತ ದರದಲ್ಲೇ ವಿತರಿಸಬೇಕು ಎಂದು ಒತ್ತಾಯಿಸಿದರು.

ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಗೊಬ್ಬರ, ಬೀಜ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಬೇಜವಾಬ್ದಾರಿ ಕಾರಣಕ್ಕೆ ಜಿಲ್ಲೆಯ ರೈತರು ಬೀದಿಯಲ್ಲಿ ನಿಂತು ಕಾಯುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಎರಡು ಪ್ಯಾಕೆಟ್‌ಗಾಗಿ ಹಗಲೆಲ್ಲ ಕಾಯಬೇಕಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆಯಾಗಬೇಕು. ರೈತರು ಕೇಳುವಷ್ಟು ಗೊಬ್ಬರ ವಿತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಖಾಸಗಿಯಾಗಿ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದು, ಗೋದಾಮಿನಲ್ಲಿ ಗೊಬ್ಬರ ದಾಸ್ತಾನು ಇದ್ದರೂ ಇಲ್ಲವೆಂದು ಹೇಳುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲು ಮೌನವಹಿಸಿದ್ದಾರೆ ಎಂದು ಚಿಕ್ಕಬಿಗೆರೆ ನಾಗರಾಜ್, ಹೊಳಲ್ಕೆರೆ ಶಿವಕುಮಾರ್ ದೂರಿದರು.

ಯೂರಿಯಾ ರಸಗೊಬ್ಬರ ಅಭಾವದಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೊಬ್ಬರ, ಬೀಜ, ಔಷಧಿ ದಾಸ್ತಾನು ಸಂಗ್ರಹಕ್ಕೆ ಕ್ರಮವಹಿಸಬೇಕು ಎಂದು ಕೋರಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ