ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜೀವನದ ಸಂಪತ್ತುಗಳಲ್ಲಿ ಶಿಕ್ಷಣ ಸಂಪತ್ತು ಅಮೂಲ್ಯವಾಗಿದೆ. ಉಳಿದ ಸಂಪತ್ತು ಕದಿಯಬಹುದು. ಶಿಕ್ಷಣ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಇಂತಹ ಸಂಪತ್ತು ನಮ್ಮದಾಗಿಸಿಕೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.ತಾಲೂಕಿನ ಹೂವಿನಹಿಪ್ಪರಗಿ ಆಶೀರ್ವಾದ ಶಿಕ್ಷಣ ಸಂಸ್ಥೆಯ ಆಶೀರ್ವಾದ ಪಬ್ಲಿಕ್ ಸ್ಕೂಲ್, ಪರಿವರ್ತನ ವಿದ್ಯಾಮಂದಿರದ ಅಭಿವ್ಯಕ್ತಿ-ಸಂಭ್ರಮ ೨೦೨೪-೨೫ ನಿಮಿತ್ತ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ, ಪಾಲಕರ ಪಾತ್ರವಿದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಪಾಲಕರು ಮಕ್ಕಳಿಗೆ ಸಮಯ ಕೊಡುವುದನ್ನು ಮರೆಯಬಾರದು. ಪಾಲಕರು ಮಕ್ಕಳ ಕಡೆಗೆ ಗಮನ ಹರಿಸದೇ ಹೋದರೆ ಅವರು ದಾರಿ ತಪ್ಪುವ ಸಾಧ್ಯತೆಯಿದೆ. ಮಕ್ಕಳು ಯಾವ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದುತ್ತಾರೋ ಅವರಿಗೆ ಆ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಜೀವನದಲ್ಲಿ ಏನಾದರೂ ಗುರಿ ಇರಬೇಕು. ಹಿಂದೆ ಗುರು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಆಶೀರ್ವಾದ ಶಿಕ್ಷಣ ಸಂಸ್ಥೆಯ ಶಾಲೆ ವಿದ್ಯಾರ್ಥಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ದಲ್ಲಿ ಭಾಗವಹಿಸಿದ್ದು ಸಂತಸದಾಯಕ ಸಂಗತಿ. ಈ ಶಾಲೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯು ನಿರಂತರವಾಗಿ ಬೆಳೆದು ಮುಂದಿನ ದಿನಗಳಲ್ಲಿ ಪದವಿ ಪೂರ್ವ, ಪದವಿ, ವೈದ್ಯಕೀಯ ಕಾಲೇಜುಗಳನ್ನು ತೆಗೆಯುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಶಿಕ್ಷಣ ಎನ್ನುವುದು ತಪಸ್ಸು ಇದ್ದ ಹಾಗೆ. ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇದು ಶಿಕ್ಷಣ ಕಲಿಕೆಗೂ ಪೂರಕವಾಗುತ್ತದೆ. ಅತಿ ಮೊಬೈಲ್ ಬಳಕೆಯಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಪಾಲಕರು ಮಕ್ಕಳು ಮೊಬೈಲ್ ಬಳಕೆ ಮಾಡದಂತೆ ಗಮನ ಹರಿಸಬೇಕು. ಈ ಶಾಲೆಯು ಮಕ್ಕಳಲ್ಲಿರುವ ಪ್ರತಿಭೆ ಅಭಿವ್ಯಕ್ತಗೊಳಿಸಲು ಅಭಿವ್ಯಕ್ತಿ ಸಂಭ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಈ ಶಾಲೆಯು ವಿವಿಧ ಗಣ್ಯರಿಂದ ದೇಣಿಗೆ ಪಡೆದುಕೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಕೈಂಕರ್ಯ ಮಾಡುತ್ತಿರುವುದು ಸಂತಸದಾಯಕ ಸಂಗತಿ. ಈ ಶಾಲೆಯಲ್ಲಿ ಕಲಿಯುವ ಮಕ್ಕಳು ಸಾಧನೆ ಮಾಡುವ ಛಲ ಮೈಗೂಡಿಸಿಕೊಳ್ಳುವಂತಾಗಲೆಂದರು.
ವಕೀಲ ಜಿ.ಬಿ.ಬಾಗೇವಾಡಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ವ್ಹಿ.ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಬಸವರಾಜ ತಿಳಗೂಳ, ಪಿಕೆಪಿಎಸ್ ಅಧ್ಯಕ್ಷ ಪಿ.ಜಿ.ಗೋಠೆದ, ಸಂಸ್ಥೆ ನಿರ್ದೇಶಕ ರಾಜಶೇಖರ ಸಜ್ಜನ, ಸುರೇಶ ಸಜ್ಜನ, ಸಂಗಣ್ಣ ಹುನಗುಂದ, ಆನಂದ ಪತ್ತಾರ, ಸಿಆರ್‌ಪಿ ಸುಮಿತ್ರಾ ತೋಟದ, ಕಾನಿಪ ಸಂಘದ ಜಿಲ್ಲಾ ಹಂಗಾಮಿ ಅಧ್ಯಕ್ಷ ಪ್ರಕಾಶ ಬೆಣ್ಣೂರ, ಸಂಸ್ಥೆ ಕಾರ್ಯದರ್ಶಿ ವಿದ್ಯಾಶ್ರೀ ಸಜ್ಜನ ಇದ್ದರು. ವೈ.ಎಸ್.ಬೇಲಿ ಸ್ವಾಗತಿಸಿ, ಬಿ.ಟಿ.ದೊಡಮನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ವರ್ಗಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉತ್ತಮ ಬಾಲಕ, ಬಾಲಕಿ ಪ್ರಶಸ್ತಿ ವಿತರಣೆ, ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಜರುಗಿತು. ನಂತರ ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.