ಮಕ್ಕಳಲ್ಲಿನ ಆಸಕ್ತಿ ಅಭಿರುಚಿಗೆ ಪ್ರೋತ್ಸಾಹಿಸಿ: ಬಸವರಾಜ ಹೊರಟ್ಟಿ

KannadaprabhaNewsNetwork |  
Published : Nov 26, 2025, 02:30 AM IST
ಕಾರ್ಯಕ್ರಮದಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಬಾಲ್ಯದಿಂದಲೇ ಮಕ್ಕಳಿಗೆ ಶ್ರದ್ಧೆ ಶಿಸ್ತು ಕಲಿಸಬೇಕು. ಎಲ್ಲಿ ಹೇಗೆ ವರ್ತಿಸಬೇಕು ಎಂಬ ಕುರಿತು ತಿಳಿವಳಿಕೆ ನೀಡಬೇಕು. ಅದು ಅವರ ಜೀವನದಲ್ಲಿ ಅಗಾಧ ಬದಲಾವಣೆಗೆ ಕಾರಣವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಗದಗ: ಶಿಕ್ಷಕರು, ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿ ಅಭಿರುಚಿ ಗುರುತಿಸಿ ಪ್ರೋತ್ಸಾಹ ನೀಡಿದರೆ ಜೀವನದಲ್ಲಿ ಮಹತ್ತರ ಸಾಧನೆ ಮಕ್ಕಳಿಂದ ಸಾಧ್ಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಸ್ಥಳೀಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಜರುಗಿದ ಪ್ರಾಚ್ಯಪ್ರಜ್ಞೆ ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದಿಂದಲೇ ಮಕ್ಕಳಿಗೆ ಶ್ರದ್ಧೆ ಶಿಸ್ತು ಕಲಿಸಬೇಕು. ಎಲ್ಲಿ ಹೇಗೆ ವರ್ತಿಸಬೇಕು ಎಂಬ ಕುರಿತು ತಿಳಿವಳಿಕೆ ನೀಡಬೇಕು. ಅದು ಅವರ ಜೀವನದಲ್ಲಿ ಅಗಾಧ ಬದಲಾವಣೆಗೆ ಕಾರಣವಾಗಲಿದೆ ಎಂದರು.

ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಸಹ ಪ್ರಯತ್ನ ನಡೆಸಿದ್ದು, ಸಾರ್ವಜನಿಕರ‌ ಸಹಬಾಗಿತ್ವವು ಅಷ್ಟೇ ಪ್ರಮುಖ. ಪ್ರಾಚ್ಯಪ್ರಜ್ಞೆ ಕಾರ್ಯಕ್ರಮದಲ್ಲಿ ಮಕ್ಕಳು ಭಾಷಣ, ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ‌ ಮೂಲಕ ಪ್ರಾಚ್ಯ ಶಿಲ್ಪ ಕಲೆಯ ಕುರಿತು ಅರಿವು ಹೊಂದಿದ್ದಾರೆ ಎಂದರು.

ಪ್ರತಿವರ್ಷ ನಡೆಸುವ ಈ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ಒಂದಾದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಹೆಣ್ಣುಮಗುವಿಗೆ ಪ್ರಶಸ್ತಿ ನೀಡಲು ಅವ್ವ ಟ್ರಸ್ಟ್ ವತಿಯಿಂದ ₹3 ಲಕ್ಷ ಅನುದಾನ ನೀಡುತ್ತೇನೆ ಘೋಷಿಸಿದರು. ಅದನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಿಂದ ಪ್ರಶಸ್ತಿಯನ್ನು ನೀಡಬೇಕು ಎಂದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ. ಮಾತನಾಡಿ, ಸಚಿವ ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಇಲಾಖೆ ಸಚಿವರಾದ ಮೇಲೆ ಈ ಪುರಾತತ್ವ ಇಲಾಖೆಗೆ ಹೊಸ ಚೈತನ್ಯ, ರೂಪುರೇಷೆ ನೀಡಿದ್ದಾರೆ. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಇವುಗಳನ್ನು ಕೆಲವು ಎನ್‌ಜಿಒ ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದೆ ಬಂದಿವೆ. ಅವರಿಗೆ ಧನ್ಯವಾದಗಳು ಎಂದರು.

ಈವರೆಗೆ ರಾಜ್ಯದಲ್ಲಿ 14450 ಗ್ರಾಮಗಳ‌ ಸ್ಮಾರಕ ಶಿಲ್ಪಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಇನ್ನು ಕಾರ್ಯ ನಿರಂತರ ನಡೆದಿದೆ. ಈ ಕಾರ್ಯ ಶೀಘ್ರದಲ್ಲೇ ಪೂರ್ಣ ಮಾಡುವ ಬಗ್ಗೆ ಕೆಲಸ ನಡೆದಿದೆ. ಪೂರ್ಣವಾದರೆ ದೇಶದಲ್ಲೇ ಜಿಯೊ ಟ್ಯಾಂಗಿಂಗ್ ಮಾಡಿದ ರಾಜ್ಯ ಕರ್ನಾಟಕ ಆಗುತ್ತದೆ. ಇದು ನಮ್ನ ಹೆಮ್ಮೆ. ಜಿಯೊ ಟ್ಯಾಗಿಂಗ್ ಮಾಡಿದಲ್ಲಿ ಆ ಶಿಲ್ಪ ಒಂದು ವೇಳೆ ಹಾಳಾದರೆ ಅದನ್ನು ಪುನಃ ಸಿದ್ಧಪಡಿಸಲು ಸಹಕಾರಿ ಆಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ವಿವಿ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಆರ್.ಎಸ್. ಬುರಡಿ, ಡಾ. ಡಿ. ಸ್ಮಿತಾ, ಡಾ. ಆರ್. ಶೇಜೇಶ್ವರ, ಡಾ. ಸಿ.ಎನ್. ಮಂಜುಳಾ, ತಾರಕೇಶ್ ಟಿ. ಸೇರಿದಂತೆ ಇತರರು ಇದ್ದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಶರಣು ಗೋಗೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ