ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಉತ್ತೇಜನ: ಎಚ್.ಡಿ. ತಮ್ಮಯ್ಯ

KannadaprabhaNewsNetwork |  
Published : Nov 15, 2025, 01:45 AM IST
ಚಿಕ್ಕಮಗಳೂರು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಜಿಲ್ಲಾಮಟ್ಟದ ೧೪ ಮತ್ತು ೧೭ ವಯೋಮಾನದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟವನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಉದ್ಘಾಟಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರುಸಮಾಜದ ಕಟ್ಟ ಕಡೆ ವ್ಯಕ್ತಿಗಳ ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರಾರಂಭೋತ್ಸವಕ್ಕೆ ಉತ್ತೇಜನ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜದ ಕಟ್ಟ ಕಡೆ ವ್ಯಕ್ತಿಗಳ ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರಾರಂಭೋತ್ಸವಕ್ಕೆ ಉತ್ತೇಜನ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.ಬುಧವಾರ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ 14 ಮತ್ತು 17 ವಯೋಮಾನದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬೆಳಗಾಂನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕ್ರೀಡಾಕೂಟಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಈಗ ತಾಲೂಕು ಮಟ್ಟಕ್ಕೆ ₹25 ಸಾವಿರ ಮತ್ತು ಜಿಲ್ಲಾ ಮಟ್ಟಕ್ಕೆ ₹50 ಸಾವಿರ ಅನುದಾನ ನೀಡುತ್ತಿದ್ದು, ಇದು ಸಾಕಾಗುತ್ತಿಲ್ಲ. ಅನುದಾನ ಹೆಚ್ಚುಮಾಡಿ ಕ್ರೀಡಾಪಟುಗಳಿಗೆ ಅಗತ್ಯ ಇರುವ ಸಲಕರಣೆಗಳು ಹಾಗೂ ಉಡುಪು ನೀಡುವ ಬಗ್ಗೆ ಸರ್ಕಾರದಲ್ಲಿ ಗಟ್ಟಿ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿರುವ ಬಗ್ಗೆ ಕೆಲವರು ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರ ಮೇಲೆ ದೂರುತ್ತಿದ್ದಾರೆ. ಮುರಾಜಿ, ಏಕಲವ್ಯ, ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರ ವಸತಿ ಶಾಲೆಗಳಿಗೆ ಹೆಚ್ಚು ಸೌಲಭ್ಯ ಕಲ್ಪಿಸಿದೆ ಎಂಬುದನ್ನು ದೂರುವವರು ಮನಗಾಣಬೇಕು ಎಂದರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇವೆಂಬ ಗ್ರಾಮಾಂತರ ಮಕ್ಕಳಲ್ಲಿ ಕೀಳರಿಮೆ ಬೇಡ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಪಿ.ಟಿ ಉಷಾ ಸಾಧನೆ ಬಗ್ಗೆ ಈಗಿನ ವಿದ್ಯಾರ್ಥಿಗಳು ತಿಳಿಯಬೇಕು ಎಂದು ಹೇಳಿದರು.ಧ್ವಜಾರೋಹಣದ ಮೂಲಕ ಕ್ರೀಡಾಕೂಟ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತ ನಾಡಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಇತ್ಯರ್ಥಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಕ್ರೀಡೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಗುರ್ತಿಸಿ ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡಬೇಕೆಂದು ಕರೆನೀಡಿದರು.ಆರೋಗ್ಯ ಮತ್ತು ಸದೃಢ ದೇಹಕ್ಕೆ ಕ್ರೀಡೆ ಬಹಳ ಮುಖ್ಯವಾಗಿದ್ದು, ಅದಕ್ಕಾಗಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ, ಡಯಟ್ ಉಪನಿರ್ದೇಶಕ ಸುಂದ್ರೇಶ್, ಡಿಡಿಪಿಐ ತಿಮ್ಮರಾಜು, ತಾಲೂಕು ದೈಹಿಕ ಪರೀಕ್ಷಕ ಮಹೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಮೂರ್ತಿ, ಶಂಕರೇಗೌಡ, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಸ್ವಾಗತಿಸಿದರು.

PREV

Recommended Stories

ದಾವಣಗೆರೆಯಲ್ಲಿ 2 ತಿಂಗಳಲ್ಲಿ ಐಟಿ-ಬಿಟಿ ಕಂಪನಿ ಆರಂಭ
ಅಂಗಾಂಗ ದಾನ ಕುರಿತು ಅರಿವು ಮೂಡಿಸಬೇಕು