ಕನ್ನಡಪ್ರಭ ವಾರ್ತೆ ಹೊಳೆನರಸೀಪುರಶಾಲೆಯಲ್ಲಿ ಕಲಿಸುವ ಶಿಸ್ತು, ಅದರ ಪಾಲನೆಗೆ ಶಿಕ್ಷಕರ ಒತ್ತಾಯ ನಿಮಗೆ ಕಷ್ಟ ಅನಿಸಬಹುದು. ಆದರೆ ಪ್ರೀತಿಯಿಂದ ಶಿಸ್ತು ಹಾಗೂ ಸಮಯಪ್ರಜ್ಞೆಯನ್ನು ಪಾಲನೆ ಮಾಡುವುದನ್ನು ಕಲಿಕೆಯ ಸಮಯದಲ್ಲಿ ಮತ್ತು ಜೀವನದಲ್ಲಿ ರೂಢಿಸಿಕೊಂಡಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಜತೆಗೆ ಉತ್ತಮವಾದ ಶಿಸ್ತುಬದ್ಧ ಹಾಗೂ ಕಟ್ಟುನಿಟ್ಟಿನ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಸಲಹೆ ನೀಡಿದರು.ತಾಲೂಕಿನ ತಟ್ಟೆಕರೆಯಲ್ಲಿ ಇರುವ ಆದರ್ಶ ವಿದ್ಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮಗಳ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ನೇಹಿತರ ಒತ್ತಾಯ, ಕುತೂಹಲ, ಆಕರ್ಷಣೆ, ಸ್ನೇಹ ಅಥವಾ ಒತ್ತಡಕ್ಕೆ ಸಿಲುಕಿ ಮಾದಕ ವಸ್ತುಗಳನ್ನು ಬಳಸಲು ಪ್ರೇರೇಪಿಸುವ ಯಾವುದರಲ್ಲೂ ನೀವು ಸಿಲುಕಬಾರದು. ವಿದ್ಯಾರ್ಥಿಗಳು ಆಗುಂತಕರು ನೀಡುವ ಚಾಕೋಲೇಟ್, ಸ್ನೇಹಿತರ ಜತೆ ತೆರಳಿದ್ದ ಸಂದರ್ಭ ಅಪರಿಚಿತರು ನೀಡುವ ತಿಂಡಿ, ಪಾನೀಯಗಳನ್ನು ಸೇವಿಸಬಾರದು, ಇತ್ತೀಚಿನ ವರ್ಷಗಳಲ್ಲಿ ಚಾಕೋಲೇಟ್, ಜ್ಯೂಸ್ ಅಥವಾ ಇನ್ಯಾವುದೋ ರೀತಿಯಲ್ಲಿ ಮಾದಕ ವಸ್ತುಗಳ ಬಳಕೆಗೆ ಪ್ರೇರೇಪಿಸಿ, ವಿದ್ಯಾರ್ಥಿಗಳ ಜೀವನವನ್ನು ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ವಿದ್ಯಾರ್ಥಿಗಳು ಹೊರಗಿನ ವ್ಯಕ್ತಿಗಳು ನೀಡಿದ ಪದಾರ್ಥಗಳ ಬಳಕೆ ಮಾಡುವ ಮುನ್ನ ಜಾಗ್ರತೆ ವಹಿಸುವುದು ಮುಖ್ಯವಾಗಿದೆ ಎಂದರು. ಬಾಲ್ಯವಿವಾಹ, ಅದರಿಂದಾಗುವ ಪರಿಣಾಮಗಳು ಹಾಗೂ ಸಮಸ್ಯೆ ಜತೆಗೆ ಕಾನೂನಿನಿಂದ ದೊರೆಯುವ ರಕ್ಷಣೆ ಮತ್ತು ಶಿಕ್ಷೆ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.ಬಿಇಒ ಸೋಮಲಿಂಗೇಗೌಡ, ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾ ರರಾದ ಮಮತಾ ಮಾತನಾಡಿದರು. ವಿದ್ಯಾರ್ಥಿನಿಯರಾದ ಜಾಹ್ನವಿ ಹಾಗೂ ಲಹರಿ ಪ್ರಾರ್ಥಿಸಿದರು. ಶಿಕ್ಷಕ ರಾಜೇಶ್ ಸ್ವಾಗತಿಸಿದರು ಹಾಗೂ ರವಿ ಜೆ. ವಂದಿಸಿದರು ಮತ್ತು ಪ್ರಭಾಕರ್ ನಿರೂಪಿಸಿದರು.ಆದರ್ಶ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ರಾವ್, ಮುಖ್ಯ ಶಿಕ್ಷಕ ಎಚ್.ಡಿ. ಮೋಹನ್ ಕುಮಾರ್, ಶಿಕ್ಷಕರಾದ ಲೋಕೇಶ್, ಸುಜಾತ, ಎಸ್ಡಿಎಂಸಿ ಅಧ್ಯಕ್ಷ ಗಿರೀಶ್, ನ್ಯಾಯಾಲಯದ ನೌಕರ ಕುಮಾರ್ ಇತರರು ಇದ್ದರು.