ಜಾತಿ ನಿರ್ಮೂಲನೆಗೆ ಅಂತರ್ಜಾತಿ ಮದುವೆಗೆ ಪ್ರೋತ್ಸಾಹ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Jan 13, 2025, 12:46 AM ISTUpdated : Jan 13, 2025, 12:50 PM IST
12ಎಚ್‌ಪಿಟಿ2- ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಂಡಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಸಾಮೂಹಿಕ ಮದುವೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಧು, ವರರಿಗೆ ಆಶೀರ್ವದಿಸಿದರು. | Kannada Prabha

ಸಾರಾಂಶ

ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ ಇರದೇ ಪರಸ್ಪರ ಗೌರವಿಸುವ, ಪ್ರೀತಿಸುವ ವಾತಾವರಣ ಇರಬೇಕು.

ಹೊಸಪೇಟೆ: ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ ಇರದೇ ಪರಸ್ಪರ ಗೌರವಿಸುವ, ಪ್ರೀತಿಸುವ ವಾತಾವರಣ ಇರಬೇಕು. ಜಾತಿ ನಿರ್ಮೂಲನೆಗೆ ಅಂತರ್ಜಾತಿ ಮದುವೆಗೆ ಪ್ರೋತ್ಸಾಹ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆನೀಡಿದರು.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಂಡಿಹಳ್ಳಿಯಲ್ಲಿ ಮಾಜಿ ಶಾಸಕ ಸಿರಾಜ್‌ ಶೇಕ್‌ ಭಾನುವಾರ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು 23 ಜೋಡಿಗಳಿಗೆ ಆಶೀರ್ವದಿಸಿ ಮಾತನಾಡಿದ ಅವರು, ಯಾರು ಕೂಡ ಅರ್ಜಿ ಹಾಕಿಕೊಂಡು ಜಾತಿ ಆಯ್ಕೆ ಮಾಡಿಕೊಂಡು ಹುಟ್ಟುವುದಿಲ್ಲ. ಯಾವುದೇ ಧರ್ಮದಲ್ಲಿ ಜನಿಸಿದರೂ ನಾವು ಸಾಯುವ ಮುನ್ನ ಜಾತ್ಯತೀತರಾಗಬೇಕು. ಎಲ್ಲ ಜಾತಿ, ಧರ್ಮಗಳನ್ನು ಗೌರವಿಸುವಂತರಾಗಬೇಕು ಎಂದರು.

ಶ್ರೀಮಂತರು ಅದ್ಧೂರಿ ಮದುವೆ ಮಾಡುತ್ತಾರೆ. ಆದರೆ, ಬಡವರು ಕೂಡ ಮದುವೆ ಆಗಬೇಕಲ್ಲ. ಬಡವರು ಸರಳ ಮದುವೆ ಆಗಬೇಕು. "ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು " ಎಂಬ ಗಾದೆ ಇದೆ. ಬಡವರು ಮದುವೆ ಖರ್ಚು ಭರಿಸಲಾಗದೇ ಸಾಲ ಮಾಡಿಕೊಳ್ಳುತ್ತಾರೆ. ಬಳಿಕ ಮನೆ, ಆಸ್ತಿ ಮಾರಿಕೊಳ್ಳುತ್ತಾರೆ. ಬಡವರು ಬಡವರಾಗಿಯೇ ಸಾಯಬಾರದು; ಶ್ರೀಮಂತರಾಗಬೇಕು. ಬಸವಣ್ಣನವರು ಕೂಡ ಜಾತಿ ನಿರ್ಮೂಲನೆ ಆಗಬೇಕು ಎಂದು ಹೇಳಿದ್ದಾರೆ. ಬಸವಣ್ಣನವರನ್ನು ಸರ್ಕಾರ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದರು.

ರಾಷ್ಟ್ರಕವಿ ಕುವೆಂಪು ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿದ್ದು, ಜಾತಿ-ಧರ್ಮಗಳ ಬಂಧನದಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ ಎಂದಿದ್ದಾರೆ. ವಿಶ್ವಮಾನವರಾಗುವ ಮೂಲಕ ಸಮಾನತೆ ತತ್ವ ಸಾರಬೇಕು. ಬಸವಣ್ಣನವರ ಕಾಲದಲ್ಲಿಯೇ ಅಂರ್ತಜಾತಿ ವಿವಾಹ ಪದ್ಧತಿ ಪ್ರಚಲಿತವಾಗಿತ್ತು. ಅವರು ಅಂತರ್ಜಾತಿ ಮದುವೆ ಮಾಡಿಸಿದರು. ಭಾರತದ ಜಾತಿ ವ್ಯವಸ್ಥೆ ಚಲನೆರಹಿತವಾಗಿದೆ ಎಂದರು.

ರಾಜ್ಯ ಸರ್ಕಾರ ಸ್ತ್ರೀಯರಿಗೆ ಶಕ್ತಿ ತುಂಬುವುದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಜ್ಯದ ಯಾವುದೇ ಮೂಲೆಗೂ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣಿಸಬಹುದು. ಪ್ರತಿ ತಿಂಗಳು ಮನೆ ಯಜಮಾನಿಗೆ ₹2000 ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಸರ್ವಧರ್ಮ ಸಾಮೂಹಿಕ ಮದುವೆಯಲ್ಲಿ ಮದುವೆಯಾದ ವಧುಗಳಿಗೂ ದೊರೆಯಬೇಕು. ಜತೆಗೆ ಜಿಲ್ಲಾಡಳಿತ ₹50 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದರು.

ಗಣಿ ಉದ್ಯಮಿಗಳು ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜ ಕಾರ್ಯ ಮಾಡಬೇಕು. ಶ್ರೀಮಂತರು ಬಡವರ ಉದ್ಧಾರಕ್ಕಾಗಿ ಕೆಲಸ ಮಾಡಬೇಕು. ಸಮಾಜದ ಸಮಾಜದ ಋಣ ತೀರಿಸಬೇಕು. ಅಂಬೇಡ್ಕರ್‌ ಬರೆದ ಸಂವಿಧಾನ ಇರದಿದ್ದರೆ ನಾವು ಯಾರು ಕೂಡ ಶಾಸಕರು, ಮಂತ್ರಿ, ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಸಂವಿಧಾನದ ಪೀಠಿಕೆಯನ್ನು 23 ಜೋಡಿಗಳಿಗೂ ನೀಡಿರುವುದು ಉತ್ತಮ ಕಾರ್ಯ ಎಂದರು.

ಯಾವತ್ತೂ ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು, ದುರ್ಬಲರ ಮೇಲೆ ದೌರ್ಜನ್ಯ ನಡೆಯುತ್ತದೆ. ಸಮಾಜದಲ್ಲಿ ಅಸಮಾನತೆ ಹೋಗಬೇಕು. ಬಸವಣ್ಣನವರು ಮೌಢ್ಯ ಬಿಡಬೇಕು ಎಂದಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌ ಆಶಯ ಪಾಲಿಸಬೇಕು. ನಾವು ಮೌಢ್ಯ, ಕಂದಾಚಾರದಿಂದ ಹೊರಬರಬೇಕು ಎಂದರು.

ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್, ಶಾಸಕರಾದ ಎಚ್‌.ಆರ್‌. ಗವಿಯಪ್ಪ, ಡಾ.ಎನ್.ಟಿ. ಶ್ರೀನಿವಾಸ್, ಎಂ.ಪಿ. ಲತಾ, ಬಿ.ಎಂ. ನಾಗರಾಜ, ಸಂಸದ ಈ. ತುಕಾರಾಂ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಎಂ.ಎಲ್ಸಿ ನಸೀರ್‌ ಅಹಮದ್‌, ಮುಖಂಡರಾದ ದೋಟಿಹಾಳ, ಭರತ್ , ಕವಿತಾ ಸಿಂಗ್, ನಾಗರಾಜ, ಜಿಲ್ಲಾಧಿಕಾರಿ ದಿವಾಕರ ಬಾಬು, ಜಿಪಂ ಸಿಇಒ ಅಕ್ರಂ ಶಾ ಮತ್ತಿತರರಿದ್ದರು.

ಅಂಧ ಯುವತಿಗೆ ಬಾಳು ನೀಡಿದ ಮಸ್ತಾನ್‌:

ಸರ್ವಧರ್ಮ ಸಾಮೂಹಿಕ ಮದುವೆಯಲ್ಲಿ ಅಂಧ ಯುವತಿಯೋರ್ವಳಿಗೆ ಮಸ್ತಾನ್‌ ಇರ್ಫಾನ್‌ ಎಂಬ ವರ ಬಾಳು ನೀಡಿದ. ಯುವಕನ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದರು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಮಾಡಿದ ಕಾರ್ಮಿಕರಲ್ಲಿ ಒಬ್ಬರು ಕೂಡ ಸಾಮೂಹಿಕ ಮದುವೆಯಲ್ಲಿ ಸಪ್ತಪದಿ ತುಳಿದರು. ತಾಂಡಾಗಳ ಎರಡು ಜೋಡಿ ಕೂಡ ಈ ಸಾಮೂಹಿಕ ಮದುವೆಯಲ್ಲಿ ವಿವಾಹ ಬಂಧನಕ್ಕೊಳಗಾಯಿತು. ಈ ರೀತಿ ಬದಲಾವಣೆ ಆಗಬೇಕು ಎಂದು ಸಿಎಂ ಶ್ಲಾಘಿಸಿದರು.

ಕಾರಿನ ಬಳಿ ಕರೆದು ರೈತನ ಅಳಲು ಆಲಿಸಿದ ಸಿಎಂ:

ಸಿಎಂ ಸಿದ್ದರಾಮಯ್ಯ ತೆರಳುವಾಗ ಕೈಯಲ್ಲಿ ಮನವಿ ಹಿಡಿದಿದ್ದ ರೈತನೋರ್ವರನ್ನು ತಮ್ಮ ಬಳಿ ಕರೆದು, ಅಳಲು ಆಲಿಸಿದರು. ಈ ರೈತನ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳದಲ್ಲೇ ಜಿಲ್ಲಾಧಿಕಾರಿ ದಿವಾಕರ್‌ ಅವರಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ