ಬಂಗಾರಪೇಟೆ ಪುರಸಭೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Feb 04, 2025, 12:32 AM IST
3ಕೆಬಿಪಿಟಿ.2.ಬಂಗಾರಪೇಟೆ ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುತ್ತಿರುವ ಆರೋಗ್ಯಾಧಿಕಾರಿ ಗೋವಿಂದರಾಜು ಹಾಗೂ ಸಿಬ್ಬಂದಿ. | Kannada Prabha

ಸಾರಾಂಶ

ಫುಟ್‌ಪಾತ್ ವ್ಯಾಪಾರಿಗಳು ಹೂ ಹಣ್ಣು, ತರಕಾರಿ, ಹೋಟೆಲ್ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಪುಟ್‌ಪಾತ್ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡುವುದರಿಂದ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದರಿಂದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕಷ್ಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಫುಟ್ ಪಾತ್‌ ಮೇಲೆ ವ್ಯಾಪಾರ ಮಾಡದಂತೆ ಹಲವು ಬಾರಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಸಹ, ಲೆಕ್ಕಿಸದೆ ಫುಟ್‌ಪಾತ್‌ ಮೇಲೆ ಪುನಃ ವ್ಯಾಪಾರ ಮಾಡುವ ಮೂಲಕ ಪಾದಚಾರಿಗಳಿಗೆ ಅಡ್ಡಿಪಡಿಸಿದ ಹಿನ್ನೆಲೆ, ಸೋಮವಾರ ದಿಢೀರನೇ ಅಧಿಕಾರಿಗಳು ದಾಳಿ ಮಾಡಿ ಫುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಿದರು.

ಬಜಾರ್‌ ರಸ್ತೆಯಲ್ಲಿ ನಿತ್ಯ ಸಾರ್ವಜನಿಕರು ಸಂಚರಿಸಲು ಇರುವ ಜಾಗವನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದರಿಂದ, ಜನರು ಓಡಾಟಕ್ಕೆ ಸ್ಥಳವಿಲ್ಲದೆ ಪರದಾಡುವಂತಾಗಿತ್ತು, ಅಲ್ಲದೆ ವಾಹನಗಳ ಸಂಚಾರಕ್ಕೂ ಸಂಚಕಾರ ಉಂಟಾಗಿತ್ತು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ದೂರುಗಳು ಬಂದ ಹಿನ್ನೆಲೆ ಪುರಸಭೆ ಅಧ್ಯಕ್ಷ ಗೋವಿಂದ ಸೂಚನೆ ಮೇರೆಗೆ, ಆರೋಗ್ಯಾಧಿಕಾರಿ ಗೋವಿಂದರಾಜು ಹಾಗೂ ನೌಕರರು ಬೆಳ್ಳಂಬೆಳಗ್ಗೆ ಕಾರ್ಯಚರಣೆ ನಡೆಸಿದರು. ಎಲ್ಲೆಲ್ಲಿ ಚರಂಡಿ ಮೇಲೆ ಅಂಗಡಿಯ ವಸ್ತುಗಳನ್ನು ಇರಿಸಲಾಗಿತ್ತೋ ಆ ವಸ್ತುಗಳನ್ನು ಬಿಸಾಡಿದರು. ಕೆಲವರು ಪುರಸಭೆ ಅಧಿಕಾರಿಗಳು ದಾಳಿ ಮಾಡಿರುವ ಸುದ್ದಿ ತಿಳಿದು ಜಾಗೃತರಾಗಿ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು.

ಈ ವೇಳೆ ಪುರಸಭೆಯ ಆರೋಗ್ಯ ಅಧಿಕಾರಿ ಗೋವಿಂದರಾಜು ಮಾತನಾಡಿ, ಫುಟ್‌ಪಾತ್ ವ್ಯಾಪಾರಿಗಳು ಹೂ ಹಣ್ಣು, ತರಕಾರಿ, ಹೋಟೆಲ್ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಪುಟ್‌ಪಾತ್ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡುವುದರಿಂದ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದರಿಂದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕಷ್ಟವಾಗುತ್ತಿದೆ. ಈ ಬಗ್ಗೆ ನಾಗರಿಕರು ಹಲವು ಬಾರಿ ಪುರಸಭೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಕಳೆದ ತಿಂಗಳಲ್ಲೂ ಸಹ ತೆರವು ಕಾರ್ಯಾಚರಣೆ ಮಾಡಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಮತ್ತೆ ಒತ್ತುವರಿ ಮುಂದುವರಿಸಿದ್ದು, ಫುಟ್ ಪಾತ್ ಮೇಲೆ ಇರಿಸಿದ್ದ ವಸ್ತುಗಳನ್ನು ಹಾಗೂ ರಸ್ತೆ ಮೇಲೆ ಹಾಕಿದ್ದ ತಾರ್ಪಾಲ್ ಗಳನ್ನು ತೆರವುಗೊಳಿಸಿ ಜಪ್ತಿ ಮಾಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಇದೇ ರೀತಿ ಪುಟ್ ಪಾತ್ ಒತ್ತುವರಿ ಮಾಡಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಸ್ತೆಯ ಅಕ್ಕಪಕ್ಕದಲ್ಲಿದ್ದ ತಳ್ಳುವ ಗಾಡಿಗಳು ಮತ್ತು ಅನಧಿಕೃತ ನಾಮಫಲಕಗಳನ್ನು ತೆರವು ಮಾಡಲಾಯಿತು ಎಂದರು.

ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ, ಅಂಗಡಿ ಸರಕುಗಳನ್ನು ಇಡದೇ ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಹಾಗೂ ವ್ಯಾಪಾರಸ್ಥರು ಸಹರಿಸಬೇಕು ಎಂದು ಅವರು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!