ವಿರೋಧದ ನಡುವೆ ಒತ್ತುವರಿ ತೆರವು ಕಾರ್ಯ ಮುಂದುವರಿಕೆ

KannadaprabhaNewsNetwork |  
Published : Jul 07, 2026, 01:45 AM IST
7ಎಚ್ಎಸ್ಎನ್9 :  | Kannada Prabha

ಸಾರಾಂಶ

ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಜ್ಞಾನಾಕ್ಷಿ ಕಲ್ಯಾಣ ಮಂಟಪದ ಕಟ್ಟಡ ಯುಜಿಡಿ ಮೇಲೆಯೇ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮೊದಲು ಅಂತಹ ಅತಿಕ್ರಮಣಗಳನ್ನು ತೆರವುಗೊಳಿಸಿ, ನಂತರ ಬಡವರ ಮೇಲೆ ಕ್ರಮ ಕೈಗೊಳ್ಳಿ. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬ ಧೋರಣೆ ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸಿಬ್ಬಂದಿ, ತಾವು ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಆಕ್ಷೇಪಣೆಗಳಿದ್ದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದಲ್ಲಿ ರಸ್ತೆಬದಿ ವ್ಯಾಪಾರದಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿರುವ ಅಡಚಣೆ ಹಾಗೂ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸನ ಮಹಾನಗರ ಪಾಲಿಕೆ ಸೋಮವಾರ ಮತ್ತೆ ರಸ್ತೆಬದಿ ಗೂಡಂಗಡಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿತು. ಆದರೆ ಈ ವೇಳೆ ಸಣ್ಣ ವ್ಯಾಪಾರಿಗಳ ಪರವಾಗಿ ಸಿಐಟಿಯು ಮುಖಂಡ ಅರವಿಂದ್ ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆಯಿತು.

ನಗರದ ರೈಲ್ವೆ ನಿಲ್ದಾಣದ ಸಮೀಪದ ಪ್ರದೇಶದಲ್ಲಿ ಈ ಹಿಂದೆ ಗೂಡಂಗಡಿ ತೆರವು ಕಾರ್ಯಾಚರಣೆಗೆ ಮುಂದಾದಾಗ ವ್ಯಾಪಾರಿಗಳ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಪಾಲಿಕೆ ಅಧಿಕಾರಿಗಳು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿದ್ದರು. ನಿಗದಿತ ಅವಧಿ ಮುಗಿದ ಬಳಿಕ ಸೋಮವಾರ ಬೆಳಿಗ್ಗೆ ಜೆಸಿಬಿ ಯಂತ್ರದೊಂದಿಗೆ ಪಾಲಿಕೆ ಸಿಬ್ಬಂದಿ ಮತ್ತೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ಆರಂಭಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಐಟಿಯು ಮುಖಂಡ ಅರವಿಂದ್, ಸಣ್ಣ ವ್ಯಾಪಾರಿಗಳಿಗೆ ಯಾವುದೇ ಪೂರ್ವ ನೋಟಿಸ್ ನೀಡದೇ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೇ, ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಿರುವವರನ್ನು ಏಕಾಏಕಿ ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಪ್ರಶ್ನಿಸಿದರು. ಬಡ ವ್ಯಾಪಾರಿಗಳ ಗೂಡಂಗಡಿಗಳನ್ನು ತೆರವುಗೊಳಿಸುವ ಮೊದಲು ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಜ್ಞಾನಾಕ್ಷಿ ಕಲ್ಯಾಣ ಮಂಟಪದ ಕಟ್ಟಡ ಯುಜಿಡಿ ಮೇಲೆಯೇ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮೊದಲು ಅಂತಹ ಅತಿಕ್ರಮಣಗಳನ್ನು ತೆರವುಗೊಳಿಸಿ, ನಂತರ ಬಡವರ ಮೇಲೆ ಕ್ರಮ ಕೈಗೊಳ್ಳಿ. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬ ಧೋರಣೆ ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸಿಬ್ಬಂದಿ, ತಾವು ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಆಕ್ಷೇಪಣೆಗಳಿದ್ದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಇದಾದ ಬಳಿಕ ಮಳೆಯ ನಡುವೆಯೇ ಪಾಲಿಕೆ ಸಿಬ್ಬಂದಿ ರಸ್ತೆಬದಿಯ ಗೂಡಂಗಡಿಗಳು, ತಳ್ಳುಗಾಡಿಗಳು ಹಾಗೂ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಿದರು. ರಸ್ತೆ ತೆರವು ಕಾರ್ಯಾಚರಣೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ರಸ್ತೆ ಸಂಚಾರ ಸುಗಮಗೊಳಿಸುವುದು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ಕೋಟಿಗೂ ಅಧಿಕ ವಿಮೆ ಹಣ ಅರ್ಹ ರೈತರಿಗೆ ವಿತರಣೆ: ಸಿ.ಶಿವಕುಮಾರ್
ಕೃಷಿ ಕ್ಷೇತ್ರದಲ್ಲಿ ಜಗಜೀವನ್ ರಾಮ್‌ ಪಾತ್ರ ಅಪಾರ: ಲೋಕೇಶ್