ಕನ್ನಡಪ್ರಭ ವಾರ್ತೆ ಕೋಲಾರ
ಹೆಸರಿಗಷ್ಟೇ ಜಿಲ್ಲಾ ಕೇಂದ್ರವಾಗಿದ್ದರೂ ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ, ಪುಟ್‌ಪಾತ್ ಒತ್ತುವರಿ, ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದ್ದರೂ ಹೇಳುವವರು ಕೇಳುವವರಿಲ್ಲ, ನಗರಸಭೆಯಂತೂ ಜಾಣ ನಿದ್ರೆಗೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಕಟುಸತ್ಯವಾಗಿದೆ.ನಗರದ ಪ್ರಮುಖ ರಸ್ತೆಗಳಾದ ಟೇಕಲ್ ರಸ್ತೆ, ಅಂತರಗಂಗೆ ರಸ್ತೆ, ಹಳೆ ಬಸ್‌ನಿಲ್ದಾಣದ ಆವರಣಗಳಲ್ಲಿ, ಪುಟ್‌ಪಾತ್ ರಸ್ತೆಗಳಲ್ಲಿ ಅಂಗಡಿಗಳು ನಗರಸಭೆಯಿಂದ ಯಾವುದೇ ಪರವಾನಗಿ ಪಡೆಯದೆ ತಲೆಯೆತ್ತಿ ರಾಜಾರೋಷವಾಗಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳದಿರುವುದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೆ ಪುಟ್‌ಪಾತ್ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಅಂಗಡಿ- ಮುಂಗಟ್ಟುಗಳೇ ಸಾಕ್ಷಿಯಾಗಿವೆ.
ಸರ್ಕಾರದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆಂದು ಪುಟ್‌ಪಾತ್ ರಸ್ತೆಗಳನ್ನು ನಿರ್ಮಿಸಿದರೆ ಆ ರಸ್ತೆಗಳನ್ನು ಬಿಡದ ಕೆಲವರು ಪುಟ್‌ಪಾತ್ ರಸ್ತೆಗಳಲ್ಲೇ ಅಂಗಡಿಗಳನ್ನು ನಿರ್ಮಿಸಿಕೊಂಡು ನಿರಾತಂಕವಾಗಿ ವ್ಯಾಪಾರ- ವಹಿವಾಟು ಮಾಡುತ್ತಿದ್ದಾರೆ. ನಂತರ ಕಸವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಸಿ ರಸ್ತೆ ಬದಿಯಲ್ಲೇ ಬಿಸಾಡಿ ಹೋಗುತ್ತಾರೆ, ರಸ್ತೆ ಬದಿ ಬಿಸಾಡಿದ ಕಸವನ್ನು ಬೀದಿನಾಯಿಗಳು ಎಳೆತರುವ ಮೂಲಕ ರಸ್ತೆಯಿಡೀ ಕಸಮಯವಾಗುತ್ತದೆ ಜೊತೆಗೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ದ್ವಿಚಕ್ರವಾಹನ ಸವಾರರ ಮೇಲೆ ದಾಳಿ ನಡೆಸುತ್ತವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವುದಂತೂ ಸತ್ಯ.ಜಿಲ್ಲಾ ಕೇಂದ್ರದಲ್ಲಿ ನಗರಸಂಚಾರ ಮಾಡಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪುಟ್‌ಪಾತ್ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಅಂಗಡಿಗಳನ್ನು ತೆರವು ಮಾಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕಳೆದ ಮೂರ್ನ್ನಾಲ್ಕು ದಿನಗಳ ಹಿಂದೆ ನಗರಸಭೆ ಅಧಿಕಾರಿಗಳು ಟೇಕಲ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಅಂಗಡಿಗಳ ಮಾಲೀಕರಿಗೆ ತೆರವು ಮಾಡುವಂತೆ ಸೂಚಿಸಿದ್ದರೂ ಅಧಿಕಾರಿಗಳ ಮಾತಿಗೆ ಮನ್ನಣೆ ಸಿಕ್ಕಿಲ್ಲ. ಇದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯಿಂದ ವಾಕಿಂಗ್ ಪಾರ್ಕ್‌ಗಳನ್ನು ನಿರ್ಮಿಸಿದ್ದಾರೆಯೇ ಹೊರತು ಅದರ ನಿರ್ವಹಣೆಯಿಲ್ಲದೆ ಪಾರ್ಕಿನಲ್ಲಿರುವ ಗಿಡಗಳು ನೀರಿಲ್ಲದೆ ಸೊರಗುವ ದುಸ್ಥಿತಿ ಬಂದಿದೆ, ಅದರಲ್ಲೂ ಕತ್ತಲಾದ ನಂತರ ಬೀದಿ ದೀಪಗಳು ಇಲ್ಲದಿರುವ ಕಾರಣ ಪಾರ್ಕುಗಳಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಹೇಳುವವರಿಲ್ಲ ಕೇಳೋವವರಿಲ್ಲದಂತಾಗಿದೆ.ಇಷ್ಟೆಲ್ಲಾ ಜಿಲ್ಲಾ ಕೇಂದ್ರದಲ್ಲಿ ಅವ್ಯವಸ್ಥೆಗಳಿದ್ದರೂ ನಮ್ಮ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ನಾಡಹಬ್ಬಗಳಿಗೆ ಮಾತ್ರ ಕೋಲಾರಕ್ಕೆ ಬಂದು ಧ್ವಜಾರೋಹಣ ಮಾಡುವುದಕ್ಕೆ ಸೀಮಿತವಾಗಿದ್ದಾರೆಯೇ ಹೊರತು ನಗರದ ಅವ್ಯವಸ್ಥೆಗಳ ಬಗ್ಗೆ ಗಮನಹರಿಸಿಲ್ಲ,
---------ಕೋಲಾರದ ವಿವಿಧ ಕಡೆಗಳಲ್ಲಿ ಹಳೆ ಕಟ್ಟಡಗಳನ್ನು ಕೆಡವಿದ ನಂತರ ಕಲ್ಲುಮಣ್ಣನ್ನು ಕೋಲಾರಮ್ಮನ ಕೆರೆಯಂಗಳ, ಸುವರ್ಣಭವನದ ಸಮೀಪ, ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಲ್ಲಿ ತಂದು ಸುರಿಯುತ್ತಿದ್ದರೂ ಯಾರೂ ಹೇಳುವವರಾಗಲಿ ಕೇಳುವವರಾಗಲಿ ಇಲ್ಲದಂತಾಗಿದೆ, ಇದು ಜಿಲ್ಲಾಕೇಂದ್ರವಾದ ಕೋಲಾರದ ಪರಿಸ್ಥಿತಿಯಾಗಿದೆ, ಈ ಕುರಿತು ಜಿಲ್ಲಾಡಳಿತ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಹಾಬಿ ರಮೇಶ್, ಸ್ಥಳೀಯರು.