ಕನ್ನಡಪ್ರಭ ವಾರ್ತೆ ಕೆಂಭಾವಿ
ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಡಿಎಚ್‌ಓ ಡಾ.ಮಹೇಶ ಬಿರಾದಾರ ಅವರಿಗೆ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಸುಮಾರು 50 ವರ್ಷಗಳ ಹಿಂದೆ ನಗನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರಿಗೆ ದಾನವಾಗಿ ನೀಡಲಾಗಿದ್ದ 4 ಎಕರೆ 7 ಗುಂಟೆ ಜಮೀನು ಸಂಪೂರ್ಣವಾಗಿ ಆರೋಗ್ಯ ಇಲಾಖೆಯ ಪಹಣಿಯಲ್ಲಿದೆ. ಸದ್ಯ, ಈ ಜಮೀನಿನಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಪ್ರಾಥಮಿಕ ಆಸ್ಪತ್ರೆ, ಸಿಬ್ಬಂದಿಗಳ ವಸತಿ ನಿಲಯ ಹಾಗೂ ಸಿಸಿ ರಸ್ತೆ ಸೇರಿದಂತೆ ಸುಮಾರು ₹5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಂತಹ ಪ್ರಮುಖ ಸರ್ಕಾರಿ ಆರೋಗ್ಯ ಸಂಕೀರ್ಣದ ಆವರಣದಲ್ಲಿ ಯಾವುದೇ ಅಧಿಕೃತ ಆದೇಶ ಅಥವಾ ಅನುಮತಿಯಿಲ್ಲದೆ, ಕೆಲವು ಖಾಸಗಿ ವ್ಯಕ್ತಿಗಳು ತಂತಿಬೇಲಿ ಅಳವಡಿಸಿದ್ದಾರೆ. ಅನಧಿಕೃತ ತಂತಿಬೇಲಿಯಿಂದ ಆಸ್ಪತ್ರೆಯ ಆವರಣವು ಸಂಪೂರ್ಣ ಕಿರಿದಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಾಹನಗಳ ಓಡಾಟಕ್ಕೂ ತೀವ್ರ ತೊಂದರೆಯಾಗುತ್ತಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಸ್ವಂತ ಆವರಣವೇ ಇಲ್ಲದಂತಾಗುವ ಆತಂಕ ಎದುರಾಗಿದೆ ಎಂದು ಮನವಿ ಮಾಡಿದ್ದಾರೆ.
ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಗನೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಾಕಲಾಗಿರುವ ಅನಧಿಕೃತ ತಂತಿ ಬೇಲಿಯನ್ನು ತೆರವುಗೊಳಿಸಬೇಕು. ಅಲ್ಲದೆ, ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಪ್ರಭಾವಿಗಳ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ ದೇಸಾಯಿ, ಶಂಕ್ರಗೌಡ ಪೊಲೀಸ್ ಪಾಟೀಲ್ ಮನವಿಯಲ್ಲಿ ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.