ರೇಣುಕಾ ಸಾವು ಪ್ರಕರಣ: ಅಪಘಾತವೋ ? ಕೊಲೆಯೋ!?

KannadaprabhaNewsNetwork |  
Published : Aug 24, 2026, 01:15 AM IST
ಮೃತ ರೇಣುಕಾ. | Kannada Prabha

ಸಾರಾಂಶ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರ ಕ್ಯಾಂಪ್‌ ರಸ್ತೆಯ ಕೃಷ್ಣಾ ಕಾಲುವೆಯಲ್ಲಿ ಇದೇ ಜುಲೈ 31 ರಂದು ಸಂಭವಿಸಿದ್ದ "ಬೈಕ್‌ ಸ್ಕಿಡ್‌ " ಅಪಘಾತ ಪ್ರಕರಣದಲ್ಲಿ, 22 ವರ್ಷದ ನವವಿವಾಹಿತೆಯೊಬ್ಬಳ ಸಾವಿನ ಪ್ರಕರಣ ಅಪಘಾತವೋ ? ಅಥವಾ ಕೊಲೆಯೋ..!? ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದು, ವ್ಯಾಪಕ ಚರ್ಚೆಗಳಿಗೆ ಗ್ರಾಸವಾಗಿದೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರ ಕ್ಯಾಂಪ್‌ ರಸ್ತೆಯ ಕೃಷ್ಣಾ ಕಾಲುವೆಯಲ್ಲಿ ಇದೇ ಜುಲೈ 31 ರಂದು ಸಂಭವಿಸಿದ್ದ "ಬೈಕ್‌ ಸ್ಕಿಡ್‌ " ಅಪಘಾತ ಪ್ರಕರಣದಲ್ಲಿ, 22 ವರ್ಷದ ನವವಿವಾಹಿತೆಯೊಬ್ಬಳ ಸಾವಿನ ಪ್ರಕರಣ ಅಪಘಾತವೋ ? ಅಥವಾ ಕೊಲೆಯೋ..!? ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದು, ವ್ಯಾಪಕ ಚರ್ಚೆಗಳಿಗೆ ಗ್ರಾಸವಾಗಿದೆ.

ಹತ್ಯೆಯೊಂದರ ಘಟನೆಯನ್ನು ‘ಅಪಘಾತ’ ಎಂದು ಬಿಂಬಿಸಲಾಗುತ್ತಿದ್ದು, ನವವಿವಾಹಿತೆಯ ಸಂಬಂಧಿಕರು ಸೇರಿದಂತೆ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆ. ಅಪಘಾತ ಸ್ಥಳದ ಪರಿಶೀಲನೆ ಹಾಗೂ ಪತಿ ಸೇರಿದಂತೆ ಕುಟುಂಬಸ್ಥರ ಹೇಳಿಕೆಗಳು ಶಂಕಾಸ್ಪದವಾಗಿದ್ದು, ದೊಡ್ಡ ಮಟ್ಟದ ಹಣದ ಆಮಿಷದ ಮೂಲಕ ಪ್ರಕರಣ ವನ್ನು ಮರೆಮಾಚಲು ಯತ್ನಿಸಲಾಗುತ್ತಿದೆ. ನವವಿವಾಹಿತೆಯೊಬ್ಬಳ ಜೀವ ಲಕ್ಷಾಂತರ ರುಪಾಯಿಗಳೆದುರು ಮುಚ್ಚಿ ಹೋಯಿತೇ ? ಎಂಬ ಪ್ರಶ್ನೆ ಇಲ್ಲಿನವರ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಎಸ್ಪಿ ಪೃಥ್ವಿಕ್‌ ಶಂಕರ್‌, ಪ್ರಕರಣದತ್ತ ಚಿತ್ತ ಹರಿಸಿದ್ದಾರೆ.

ಸುರಪುರ ತಾಲೂಕಿನ ಮಂಜಲಾಪುರದ 19 ವರ್ಷದ ರೇಣುಕಾಳನ್ನು ಪತ್ತೇಪೂರ ಗ್ರಾಮದ ಕರೆಪ್ಪ ಎಂಬಾತನ ಜೊತೆ ಮದುವೆಯಾಗಿತ್ತು. ಹದಿನೈದು ದಿನಗಳ ಹಿಂದೆ ತವರುಮನೆಗೆ ಬಂದಿದ್ದ ರೇಣುಕಾಳನ್ನು ಪತಿ ಕರೆಪ್ಪ ಪತ್ತೇಪೂರಕ್ಕೆ ವಾಪಸ್‌ ಕರೆದುಕೊಂಡು ಹೋಗುತ್ತಿದ್ದಾಗ, ಕೆಂಭಾವಿಯ ಸಾಯಿನಗರ ಕ್ಯಾಂಪ್‌ನ ಗೇಟ್‌ ಬಳಿಯ ತಿರುವಿನಲ್ಲಿ ಇವರಿದ್ದ ಬೈಕ್‌ ನಿಯಂತ್ರಣ ತಪ್ಪಿ ಕೃಷ್ಣಾ ಕಾಲುವೆಗೆ ಬಿದ್ದಿದೆ. ಈ ವೇಳೆ, ಪತಿ ಕರೆಪ್ಪ ಈಜಾಡಿ ಮೇಲಕ್ಕೆ ಬಂದನಾದರೂ, ಬೈಕ್‌ ಹಾಗೂ ರೇಣುಕಾ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಾಲುವೆಯಲ್ಲಿ ಕೊಚ್ಚಿ ಹೋದ ಮಗಳ ಹುಡುಕಿ ಕೊಡುವಂತೆ ಅ.1ರಂದು ರೇಣುಕಾಳ ತಂದೆ ನಿಂಗಪ್ಪ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಕ್ಷಣಾ ಕಾರ್ಯ ನಡೆಸಿದ ಅಗ್ನಿಶಾಮಕ ದಳಕ್ಕೆ ಭಾನುವಾರ (ಆ.2) ಗುತ್ತಿ ಬಸವಣ್ಣ ಏತ ನೀರಾವರಿ ಜಾಕ್‌ವೆಲ್ ಬಳಿ ರೇಣುಕಾಳ ಶವ ಸಿಕ್ಕಿತ್ತು. ಮೂರು ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ರೇಣುಕಾ, ಬಂಡೆಪ್ಪನ ಹಳ್ಳಿ ಜಾತ್ರೆಗೆಂದು ತವರಿಗೆ ಆಗಮಿಸಿ, ಗಂಡನ ಮನೆಗೆ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಕಾಲುವೆಗೆ ಬಿದ್ದು ಹೆಣವಾದುದ್ದು ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿತ್ತು.

ಬೈಕ್‌ ಸ್ಕಿಡ್‌ ಅಪಘಾತ ಹಾಗೂ ರೇಣುಕಾ ಸಾವಿನ ಪ್ರಕರಣ ಜನಮಾನಸದಲ್ಲಿ ವಿವಿಧ ರೀತಿಯ ಚರ್ಚೆಗಳಿಗೆ ಕಿವಿಯಾಗುತ್ತಿದೆ. ‘ಘಟನಾ ಸ್ಥಳದಲ್ಲಿ ಸಾರ್ವಜನಿಕ ವಾಗಿ ಕೆಲವರಿಗೆ ಕಂಡುಬಂದ ಸಾಕ್ಷಿಗಳು ‘ಸ್ಕಿಡ್‌’ ಪ್ರಕರಣಕ್ಕೆ ತದ್ವಿರುದ್ಧವಾಗಿತ್ತು. ರೇಣುಕಾಳ ಚಪ್ಪಲಿ ಹಾಗೂ ಬ್ಯಾಗು ಕಾಲುವೆ ಪಕ್ಕದ ರಸ್ತೆಯ ಮೇಲೆ ಇದ್ದರೆ, ಶವ ಸಿಕ್ಕಾಗ ಆಭರಣಗಳು ಇರಲಿಲ್ಲ ಎನ್ನಲಾಗಿದೆ. ಅಲ್ಲದೆ, ಸಂಪ್ರದಾಯಕ್ಕೆ ವಿರುದ್ಧವಾಗಿ ಮೃತಳ ಶವ ಸುಟ್ಟಿರುವುದೂ ಅನುಮಾನ ಮೂಡಿಸಿದೆ. ಸಂಬಂಧಿಕ ರೊಬ್ಬರ ಪ್ರಭಾವ ಬಳಸಿ, ಮೃತ ರೇಣುಕಾಳ ಪಾಲಕರೊಡನೆ ಮಾತುಕತೆ ನಡೆಸಲಾಗಿದೆ. ಇದು ಸಹಜವಾದ ಅಪಘಾತದಲ್ಲಾದ ಸಾವು ಎಂಬಂತೆ ಬಿಂಬಿಸ ಲಾಗಿದೆ ಎನ್ನುವ ಗ್ರಾಮದ ಹೆಸರೇಳಲಿಚ್ಛಿಸದ ಹಿರಿಯರೊಬ್ಬರು "ಪೊಲೀಸರು ಪ್ರಾಮಾಣಿಕ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ " ಎನ್ನುತ್ತಾರೆ.

ಕೆಂಭಾವಿ ಸಮೀಪದ ಸಾಯಿನಗರ ಕ್ಯಾಂಪ್‌ ಬಳಿ ಬೈಕ್‌ ಸ್ಕಿಡ್‌ ಹಾಗೂ ನವವಿವಾಹಿತೆ ಸಾವಿನ ಪ್ರಕರಣದಲ್ಲಿ, ಸಾರ್ವಜನಿಕವಾಗಿ ಕೆಲವೊಂದು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಪ್ರಕರಣದ ಸಮಗ್ರ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಘಟನಾ ಸ್ಥಳಕ್ಕೆ ತೆರಳಿ, ಅನುಮಾನಗಳು ಕಂಡುಬಂದಲ್ಲಿ ಮುಂದಿನ ತನಿಖೆ ಕೈಗೊಳ್ಳುತ್ತೇವೆ ಎಂದು ಯಾದಗಿರಿ ಎಸ್ಪಿ ಪೃಧ್ವಿಕ್ ಶಂಕರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬುರಗಿಯಲ್ಲಿ ಉದ್ಯಮಿ ಪಾಟೀಲ್‌ ಪುಣ್ಯಸ್ಮರಣೆ
224 ಕ್ಷೇತ್ರಗಳ ಅಂತರ್ಜಲ ಹೆಚ್ಚಳಕ್ಕೆ ಯೋಜನೆ: ಡಾ.ಅಜಯ್‌ ಧರಂಸಿಂಗ್‌