ಕನ್ನಡಪ್ರಭ ವಾರ್ತೆ ಬಂಗಾರಪೇಟೆಬಡವರ ನಿವೇಶನಗಳಿಗಾಗಿ ಮೀಸಲಿಟ್ಟ ಭೂಮಿ ಭೂ ಮಾಫಿಯಾದವರು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಇದ್ಯಾವುದಕ್ಕೂ ಸಂಬಂಧವಿಲ್ಲವೆಂಬಂತೆ ಕಂದಾಯ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿರುವುದನ್ನು ವಿರೋಧಿಸಿ ಜೀವಿಕ-ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜ್ಯ ಸಂಘಟನಾ ಸಂಚಾಲಕ ಡಾ.ರಾಮಚಂದ್ರಪ್ಪರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ನಗರದ ತಾಲೂಕು ಆಡಳಿತ ಕಚೇರಿ ಮುಂದೆ ಆರ್‌ಎಫ್‌ಎಫ್ ಹಾಗೂ ಜೀವಿಕ- ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸಾಂಕೇತಿಕ ಪ್ರತಿಭಟನಾ ಧರಣಿಯ ನೇತೃತ್ವವಹಿಸಿ ಮಾತನಾಡಿ, ತಾಲೂಕಿನ ದೊಡ್ಡಪನ್ನಾಂಡಹಳ್ಳಿ ಸರ್ವೇ ನಂ.೩೬ರಲ್ಲಿನ ೧೯೯೧ರಲ್ಲಿ ಬಡವರಿಗೆ ಆಶ್ರಯ ನೀಡುವ ಉದ್ದೇಶದಿಂದ ಸರ್ಕಾರ ೫೮ ನಿವೇಶನಗಳನ್ನು ಮಂಜೂರು ಮಾಡಿ ಹಕ್ಕುಪತ್ರಗಳನ್ನು ನೀಡಿದೆ ಎಂದರು.
30 ವರ್ಷ ಕಳೆದರೂ ನಿವೇಶನ ನೀಡಿಲ್ಲಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಮೂರು ದಶಕಗಳು ಕಳೆದರೂ ಇದುವರೆಗೂ ಜಮೀನನ್ನು ಗುರುತಿಸಿಕೊಡಲಿಲ್ಲ. ಇದರಿಂದ ಕಂಗಾಲಾಗಿರುವ ಬಡಜನರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.ಕರ್ನಾಟಕ ದಲಿತ ರೈತಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಕಂದಾಯ ಇಲಾಖೆ ನಿರ್ಲಕ್ಷತನದಿಂದಾಗಿ ನಿರ್ಗತಿಕ ಕುಟುಂಬಗಳಿಗೆ ನಿವೇಶನಗಳು ದೊರೆತಿಲ್ಲ, ಸರ್ವೇನಂ.೩೬ರಲ್ಲಿ ೨೩೪ ಎಕರೆ ಜಮೀನಿದ್ದು, ೧ ಎಕರೆ ಜಮೀನನ್ನು ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಬಲಾಢ್ಯರು ಒತ್ತುವರಿ ಮಾಡಿಕೊಳ್ಳುವುದರ ಮೂಲಕ ಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದರು. ಕೂಡಲೇ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ಧಾವಿಸಿ ಬಡವರಿಗೆ ಮೀಸಲಿಟ್ಟ ಸ್ಥಳವನ್ನು ಗುರುತಿಸಿಕೊಡಬೇಕು, ಇಲ್ಲದೆ ಹೋದಲ್ಲಿ ಜಿಲ್ಲಾಡಳಿತದ ಮುಂದೆ ದಲಿತ ಸಂಘಟನೆಗಳ ಒಕ್ಕೂಟದಿಂದ ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಡಿಎಸ್‌ಎಸ್ ರವಿಚಂದ್ರ, ತಾಲ್ಲೂಕು ಅಧ್ಯಕ್ಷ ಎಂ.ತಿಪ್ಪಣ್ಣ, ಬಿ.ಶಂಕರಪ್ಪ, ಬೀರಪ್ಪ, ಪಿ.ಎ.ಮನೋಜಿರಾವ್, ಆನಂದ್, ಕೃಷ್ಣಪ್ಪ, ಕೆ.ಕೃಷ್ಣೋಜಿರಾವ್, ಸಾವಿತ್ರಮ್ಮ, ಹುಳದೇನಹಳ್ಳಿ ವೆಂಕಟೇಶಪ್ಪ, ಹುಣಸನಹಳ್ಳಿ ಸತೀಶ್, ಕೀಲುಕೊಪ್ಪ ಮುನಿರಾಜು ಇದ್ದರು........................................................
ಬಂಗಾರಪೇಟೆ ತಾಲೂಕು ಕಚೇರಿ ಮುಂದೆ ಜೀವಿಕ- ಗ್ರಾಮೀಣಾಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.