ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಸಂಸ್ಥೆ (ಹುಡಾ) ತಮ್ಮ ಸಂಸ್ಥೆಗೆ ನೀಡಿದ್ದ ಸಿಎ ನಿವೇಶನವನ್ನು ಅತಿಕ್ರಮಣಗೊಳಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕೂಡಲೇ ತಮಗೆ ನೀಡಿರುವ ನಿವೇಶನವನ್ನು ಹುಡಾ ತೆರವುಗೊಳಿಸಿ ಕೊಡಬೇಕೆಂದು ಚಿಲಿಪಿಲಿ ಸಂಸ್ಥೆ ಅಧ್ಯಕ್ಷರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹುಡಾ ಅಧಿಕೃತವಾಗಿ ಚಿಲಿಪಿಲಿ ಸಂಸ್ಥೆಗೆ ಕಳೆದ 13 ವರ್ಷಗಳ ಹಿಂದೆ ಹತ್ತಿಕೊಳ್ಳದ ಬಳಿ ಸರ್ವೇ ನಂ. 53ಕ, ನಿವೇಶನ ಸಂಖ್ಯೆ 89ರಲ್ಲಿ ಏಳೂವರೆ ಗುಂಟೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿತ್ತು. ಇದಕ್ಕಾಗಿ ₹3.70 ಲಕ್ಷ ಹಣ ಸಹ ಕಟ್ಟಿದ್ದು, ಈ ಪೈಕಿ ನಾಲ್ಕುವರೆ ಗುಂಟೆ ಅತಿಕ್ರಮಣವಾಗಿ ಸದ್ಯ ಅಲ್ಲಿ ಮೂರು ಮನೆಗಳ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಚಿಲಿಪಿಲಿ ಸಂಸ್ಥೆಗೆ ಈ ಜಾಗ ಮಂಜೂರಾಗಿ ಇಲ್ಲಿಯ ವರೆಗೂ ಹುಡಾದಿಂದ ಜಾಗವನ್ನು ಅಳತೆ ಮಾಡಿ ಕೊಟ್ಟಿಲ್ಲ. ನಿವೇಶನವು ಅತಿಕ್ರಮಣವಾಗುತ್ತಿದೆ, ಅಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹುಡಾಗೆ ಮಾಹಿತಿ ನೀಡಿದರೂ ತಡೆಯಲಿಲ್ಲ ಎಂದು ಹಲಗತ್ತಿ ಬೇಸರ ವ್ಯಕ್ತಪಡಿಸಿದರು.ಹುಡಾ ಅಧ್ಯಕ್ಷ ಶಾಕೀರ ಸನದಿ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಾಗ, ಸ್ವತಃ ಅವರೇ ನಿವೇಶನದ ಜಾಗಕ್ಕೆ ಬಂದು ಅಕ್ರಮವಾಗಿ ಮನೆ ನಿರ್ಮಿಸುತ್ತಿರುವ ಮಾಲೀಕರಿಗೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದೆ. ಅವರು ಉಪ ವಿಭಾಗಾಧಿಕಾರಿಗೆ, ಅವರು ತಹಸೀಲ್ದಾರ್ ಅವರಿಗೆ ಸಮಸ್ಯೆಯನ್ನು ವರ್ಗಾಯಿಸಿದರು. ಆದರೆ, ಸಮಸ್ಯೆಗೆ ಮಾತ್ರ ಈವರೆಗೂ ಪರಿಹಾರ ದೊರೆತಿಲ್ಲ. ಆದ್ದರಿಂದ ಹುಡಾ ತಮ್ಮ ಸಂಸ್ಥೆಗೆ ಬೇರೆ ನಿವೇಶನ ನೀಡಬೇಕು ಅಥವಾ ಈ ನಿವೇಶನದಲ್ಲಿ ಅತಿಕ್ರಮಣಗೊಂಡಿರುವ ಕಟ್ಟಡ ತೆರವು ಮಾಡಿಕೊಡಬೇಕು ಎಂದ ಆಗ್ರಹಿಸಿದ ಹಲಗತ್ತಿ, ಹುಡಾದಿಂದ ಅಧಿಕೃತವಾಗಿ ನೀಡಿದ ನಿವೇಶನದಲ್ಲಿ ರಾಜಾರೋಷವಾಗಿ ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುವುದು, ಹುಡಾ ಅಧ್ಯಕ್ಷರು ಸೇರಿದಂತೆ ಜಿಲ್ಲಾಡಳಿತ ಸೂಚನೆ ನೀಡಿದರೂ ತೆರವುಗೊಳಿಸದೇ ಇರುವುದು ಯಾವ ನ್ಯಾಯ? ಸಮಾಜದ ಪ್ರಮುಖ ಸ್ಥಾನದಲ್ಲಿರುವ ತಮ್ಮಂತಹವರಿಗೆ ಈ ಸ್ಥಿತಿ ಉಂಟಾದರೆ, ಸಾಮಾನ್ಯ ಜನರ ಪಾಡೇನು? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ಚಿಕ್ಕಮಠ ಹಾಗೂ ಎ.ಆರ್. ದೇಸಾಯಿ ಇದ್ದರು.