ಇಂದು ಮುಷ್ಕರ: ಗೊಂದಲದಲ್ಲಿ ಬಸ್ ಸೇವೆ

KannadaprabhaNewsNetwork |  
Published : Aug 05, 2025, 12:30 AM IST

ಸಾರಾಂಶ

ಪ್ರಯಾಣಿಕರ ಹಿತದೃಷ್ಟಿಯಿಂದ ಮುಷ್ಕರದ ದಿನ ಕರ್ತವ್ಯಕ್ಕೆ ಗೈರುಹಾಜರಾಗದಂತೆ ಹಾಗೂ ರಜೆ ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಮುಷ್ಕರ ನಡೆಸದಂತೆ ಹೈಕೋರ್ಟ್ ಸಾರಿಗೆ ಸಂಸ್ಥೆಯ ನೌಕರರ ಸಂಘಕ್ಕೆ ಸಲಹೆ ಸಹ ನೀಡಲಾಗಿದೆ.

ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಬಸ್ ಸೇವೆ ನಿಲ್ಲುವುದಿಲ್ಲ ಎಂದು ವಾಯವ್ಯ ಸಾರಿಗೆ ಸಂಸ್ಥೆ ಹೇಳುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ನೌಕರರು ಹೇಳಿದ್ದಾರೆ. ಇದರಿಂದಾಗಿ ಇಂದಿನ ಮುಷ್ಕರ ಕುರಿತ ಗೊಂದಲ ಮುಂದುವರಿದಿದೆ.

ನೌಕರರು ಮುಷ್ಕರದಲ್ಲಿ ಭಾಗವಹಿಸದೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್‌ ಎಂ. ತಿಳಿಸಿದರು.

ವಾಕರಸಾ ಸಂಸ್ಥೆಯ ವ್ಯಾಪ್ತಿಯಲ್ಲಿ ಆ. 5ರಂದು ಬಸ್ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲ ಬಸ್ ಸೇವೆಗಳನ್ನು ಎಂದಿನಂತೆ ನಡೆಸಲಾಗುವುದು. ಈ ಕುರಿತು ಎಲ್ಲ ಸಾರಿಗೆ ಸಂಸ್ಥೆಯ ನೌಕರರಿಗೆ ನೋ ವರ್ಕ್, ನೋ ಪೇಮೆಂಟ್ ಎಂಬ ಸೂಚನೆಯನ್ನು ನೋಟಿಸ್ ಮೂಲಕ ತಿಳಿಸಲಾಗಿದೆ ಎಂದರು.

ಪ್ರಯಾಣಿಕರ ಹಿತದೃಷ್ಟಿಯಿಂದ ಮುಷ್ಕರದ ದಿನ ಕರ್ತವ್ಯಕ್ಕೆ ಗೈರುಹಾಜರಾಗದಂತೆ ಹಾಗೂ ರಜೆ ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಮುಷ್ಕರ ನಡೆಸದಂತೆ ಹೈಕೋರ್ಟ್ ಸಾರಿಗೆ ಸಂಸ್ಥೆಯ ನೌಕರರ ಸಂಘಕ್ಕೆ ಸಲಹೆ ಸಹ ನೀಡಲಾಗಿದೆ, ಯಾರಾದರೂ ಕರ್ತವ್ಯಕ್ಕೆ ಗೈರುಹಾಜರಾದರೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾಯುವ್ಯ ಸಾರಿಗೆ ಸಂಸ್ಥೆ ಹೇಳುತ್ತಿದ್ದರೆ, ನಮ್ಮ ಮುಷ್ಕರ ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗುತ್ತೆ, ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಹೆದರದೇ ಮುಷ್ಕರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಕಾರ್ಮಿಕರ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಇದರಿಂದ ಮಂಗಳವಾರ ಬಸ್ ಸೇವೆ ಇರುತ್ತದೆಯೋ ಇಲ್ಲವೋ ಎನ್ನುವ ಗೊಂದಲ ನಿರ್ಮಾಣವಾಗಿದೆ.

ನೌಕರರಿಗೆ ನೋಟಿಸ್: ಸಾರಿಗೆ ಸಂಸ್ಥೆಯ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 5ರಿಂದ ನೀಡಿರುವ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಬೆಳಗ್ಗೆಯಿಂದಲೇ ಆರಂಭವಾಗಲಿದೆ. ಕಡ್ಡಾಯ ಹಾಜರಾತಿಗೆ ಸೂಚಿಸಿ ಸಂಸ್ಥೆಯ ಅಧಿಕಾರಿಗಳು ಹೊರಡಿಸಿರುವ ನೋಟಿಸ್‌ಗೆ ನಾವು ಹೆದರುವುದಿಲ್ಲ. ಹಲವಾರು ವರ್ಷಗಳಿಂದ ನಮ್ಮ ಬೇಡಿಕೆಗಳು ಈಡೇರಿಲ್ಲ. ಎಲ್ಲ ನೌಕರರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗಿ, ಮುಷ್ಕರದಲ್ಲಿ ಭಾಗವಹಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಫೆಡರೇಶನ್ ತಿಳಿಸಿದೆ.

ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 5300 ಬಸ್ ಗಳಿದ್ದು ಅಂದಾಜು 21000 ಸಿಬ್ಬಂದಿ ಕೆಲಸ ಮಾಡುತ್ತಾರೆ. ದಿನನಿತ್ಯ 21 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮುಷ್ಕರದಿಂದ ಸಂಸ್ಥೆಗೆ ಅಪಾರ ನಷ್ಟವಾಗಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ