ಮೈಸೂರಿಗೆ ದಸರಾ ಗಜಪಡೆಯ ಮೊದಲ ತಂಡ ಆಗಮನ

KannadaprabhaNewsNetwork |  
Published : Aug 05, 2025, 12:30 AM IST
10 | Kannada Prabha

ಸಾರಾಂಶ

ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆಯ ಮೊದಲ ಭಾಗವಾದ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರದ ಬಳಿ ಸೋಮವಾರ ಸಂಭ್ರಮದ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ವೀರನಹೊಸಹಳ್ಳಿ (ಹುಣಸೂರು)

ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆಯ ಮೊದಲ ಭಾಗವಾದ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರದ ಬಳಿ ಸೋಮವಾರ ಸಂಭ್ರಮದ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಗಣ್ಯರು ಮಧ್ಯಾಹ್ನ 12.34ರಿಂದ 12.59 ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಗಜಪಡೆಗೆ ದೀಪ ಬೆಳಗಿ, ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಬಳಿಕ ವಿವಿಧ ಕಲಾತಂಡಗಳು ಮಂಗಳವಾದ್ಯದೊಂದಿಗೆ ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಕಂಜನ್, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು. ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿವೆ.

ವಿಶೇಷವಾಗಿ ಅಲಂಕೃತಗೊಂಡಿದ್ದ ಆನೆಗಳ ಪಾದ ತೊಳೆದು, ಆನೆಗಳ ಮೇಲಿನ ದೃಷ್ಟಿದೋಷ ತೆಗೆಯಲಾಯಿತು. ನಂತರ ಅರಿಶಿಣ, ಕುಂಕುಮ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ಶೋಡೋಪಚಾರ ಪೂಜೆ ಮಾಡಲಾಯಿತು.

ಈ ವೇಳೆ ವನದೇವತೆ, ಚಾಮುಂಡೇಶ್ವರಿ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜೆಯ ನಂತರ ಸಚಿವರು, ಶಾಸಕರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ಗಜಪಡೆಯನ್ನು ಕಾಡಿನಿಂದ ನಾಡಿಗೆ ಸ್ವಾಗತಿಸಿದರು.ಪೂರ್ಣಕುಂಭ ಸ್ವಾಗತ: ವೀರನಹೊಸಳ್ಳಿಯ ವಲಯ ಕಚೇರಿ ಬಳಿಯಿಂದ ವೀರನಹೊಸಳ್ಳಿ ಆಶ್ರಮ ಶಾಲೆವರೆಗೆ ಒಂದು ಕಿ.ಮೀ ದೂರ ಕಾಲ್ನಡಿಗೆ ಮೂಲಕ ಬಂದವು. ಈ ವೇಳೆ ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು. ಜತೆಗೆ ಚಂಡೆ, ನಗಾರಿ, ವೀರಗಾಸೆ, ಸೇರಿದಂತೆ ನಾನಾ ಕಲಾವಿದರ ತಂಡಗಳು ಗಜಪಡೆಯ ಮೆರವಣಿಗೆಗೆ ಮೆರುಗು ನೀಡಿದವು.

ಸೋಮವಾರ ಮಧ್ಯಾಹ್ನ ಮೈಸೂರಿನತ್ತ ಲಾರಿಯಲ್ಲಿ ಪಯಣ ಬೆಳೆಸಿದ ಆನೆಗಳು, ಸಂಜೆ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಆಗಮಿಸಿ ವಾಸ್ತವ್ಯ ಹೂಡಿದವು. 750 ಕೇಜಿ ತೂಕದ ಚಿನ್ನದ ಅಂಬಾರಿ ಹೊರಲು ತಾಕತ್ತು ಬರುವಂತೆ ಆನೆಗಳಿಗೆ ಪ್ರತಿ ದಿನವೂ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅಲ್ಲದೆ ಮೈಸೂರಿನಲ್ಲಿ ಅಂಬಾರಿ ಮೆರವಣಿಗೆ ಮಾಡುವ ಮಾರ್ಗದಲ್ಲಿ ಬೆಳಗ್ಗೆ, ಸಂಜೆ ತಾಲೀಮು ನಡೆಸಲಿವೆ.

ಅರ್ಜುನ ಪ್ರಶಸ್ತಿ ಪ್ರದಾನ:

ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಆನೆ ಅರ್ಜುನನ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಸಚಿವ ಈಶ್ವರ ಖಂಡ್ರೆ, ಭೀಮ ಆನೆಯ ಮಾವುತ ಹಾಗೂ ಕಾವಾಡಿಗಳಾದ ಗುಂಡ ಮತ್ತು ನಂಜುಂಡಸ್ವಾಮಿ ಅವರಿಗೆ ಪ್ರದಾನ ಮಾಡಿದರು. ಆನೆಗಳಿಗೆ ₹2 ಕೋಟಿ ವಿಮೆ

ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 14 ಆನೆಗಳು, ಅದರ ಮಾವುತರು, ಕಾವಾಡಿಗರಿಗೆ ₹2 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. ಆನೆಗಳ ನಿರ್ವಹಣೆ ಹಾಗೂ ತರಬೇತಿಯಲ್ಲಿ ಭಾಗಿಯಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೂ ವಿಮೆ ವ್ಯಾಪ್ತಿಗೆ ಸೇರಿಸಲಾಗಿದೆ. ಒಟ್ಟಾರೆ 43 ಮಂದಿಗೆ ತಲಾ ₹2 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ