ನಗರದ ಮುಖ್ಯರಸ್ತೆ ಒತ್ತುವರಿ ತೆರವು ಅಗತ್ಯ

KannadaprabhaNewsNetwork |  
Published : Apr 16, 2026, 01:45 AM IST
ಚಿತ್ರದುರ್ಗ ಡಿಸಿ | Kannada Prabha

ಸಾರಾಂಶ

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯರಸ್ತೆ ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಡಿಸಿ ಸೇರಿ ಅಧಿಕಾರಿಗಳಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯರಸ್ತೆ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯರಸ್ತೆ ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಉನ್ನತಿಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರದ ಮುಖ್ಯ ರಸ್ತೆ ಸೇರಿದಂತೆ, ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳಲ್ಲಿ ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳಿಂದಾಗಿ ರಸ್ತೆ ಕಿರಿದಾಗಿವೆ. ಇದರಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರದ ಮುಖ್ಯ ರಸ್ತೆಯ 373 ವಾಣಿಜ್ಯ ಮಳಿಗೆಗಳ ಪೈಕಿ ಬಹುತೇಕ ಕಟ್ಟಡ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ನೋಟಿಸ್ ನೀಡಿರುವ ಕಟ್ಟಡ ಮಾಲೀಕರ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಆಲಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಮುಖ್ಯರಸ್ತೆಯ ಬಹುತೇಕ ಕಟ್ಟಡ ಮಾಲೀಕರ ಬಳಿ ಸರಿಯಾದ ಆಸ್ತಿ ದಾಖಲೆಗಳು ಇಲ್ಲದಿರುವುದು, ಅನುಮೋದಿತ ಕಟ್ಟಡ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿರುವುದು, ರಸ್ತೆ ಬದಿಯ ಫುಟ್‌ಪಾತ್ ಮತ್ತು ಬಫರ್ ಝೋನ್ ಪ್ರದೇಶಗಳನ್ನು ಒತ್ತುವರಿ ಮಾಡಿರುವುದು, ವಾಸದ ಮನೆಗೆ ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು, ಎಫ್.ಎ.ಆರ್ ನಿಯಮದ ಅನುಸಾರ ರಸ್ತೆಯ ಅಗಲಕ್ಕೆ ತಕ್ಕಂತೆ ಕಟ್ಟಬೇಕಾದ ಕಟ್ಟಡದ ಎತ್ತರ ಮತ್ತು ವಿಸ್ತೀರ್ಣದ ನಿಯಮಗಳ ಉಲ್ಲಂಘಸಿರುವುದು ಸಮೀಕ್ಷೆಯ ವೇಳೆ ಕಂಡುಬಂದಿದೆ. ಪ್ರತಿಯೊಂದು ಕಟ್ಟಡಕ್ಕೂ ಪ್ರತ್ಯೇಕ ಕಡತ ನಿರ್ವಹಿಸಿ, ಅಲ್ಲಿನ ಉಲ್ಲಂಘನೆಗಳನ್ನು ನಿಖರವಾಗಿ ದಾಖಲಿಸಲಾಗಿದೆ. ಸರ್ವೋಚ್ಛ ನ್ಯಾಯಲಯದ ಆದೇಶ ಗಮನದಲ್ಲಿಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಏಕಾಏಕಿ ಕೈಗೊಳ್ಳದೇ, ಪ್ರತಿಯೊಬ್ಬ ಕಟ್ಟಡ ಮಾಲೀಕರಿಗೂ ನೋಟಿಸ್ ನೀಡಿ, ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಒದಗಿಸಲಾಗಿದೆ. ಕಾನೂನು ಬದ್ಧವಾಗಿ ಪ್ರತಿಯೊಬ್ಬರಿಗೂ ಅವಕಾಶ ನೀಡಿದ್ದು ದಾಖಲೆಗಳ ಆಧಾರದ ಮೇಲೆ ಉಲ್ಲಂಘನೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರ ಸಭೆಯಿಂದ ನಿಯಮ ಉಲ್ಲಂಘಿಸಿದ 373 ಆಸ್ತಿ ಮಾಲೀಕರಿಗೆ, ಸ್ವತ್ತಿನ ದಾಖಲೆ, ಅನುಮೋದಿತ ಕಟ್ಟ ನಕ್ಷೆ, ವಾಣಿಜ್ಯ ಪರವಾನಿಗೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ನೋಟಿಸ್‌ ನೀಡಲಾಗಿದೆ. ಈ ಪೈಕಿ 190 ಮಾಲೀಕರು ದಾಖಲೆಗಳನ್ನು ಸಲ್ಲಿಸಿದ್ದಾರೆ. 40 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ದಾಖಲೆ ಸಲ್ಲಿಸದ 183 ಮಾಲೀಕರಿಗೆ ಕೂಡಲೇ ದಾಖಲೆಗಳನ್ನು ಸಲ್ಲಿಸುವಂತೆ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಮಾಲೀಕರು ದಾಖಲೆಗಳನ್ನು ಸಲ್ಲಿಸದ್ದರೆ, ಸಬ್‌ ರಿಜಿಸ್ಟಾರ್ ಕಚೇರಿಯಿಂದ ಸ್ವತ್ತಿನ ದಾಖಲೆಗಳನ್ನು ಪಡೆದು ನಿರ್ಣಯ ಕೈಗೊಳ್ಳುವುದಾಗಿ ಪೌರಾಯುಕ್ತೆ ಲಕ್ಷ್ಮಿ ತಿಳಿಸಿದರು.

*ಅರಸನ ಕೆರೆ ಕಾಮಗಾರಿ ಮರು ಟೆಂಡರ್:

ಮುರುಘಾ ಮಠದ ಮುಂದಿನ ಅರಸನ ಕೆರೆ ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆ ದಾರ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆದಾರರ ಠೇವಣಿ ಮುಟ್ಟುಗೋಲು ಹಾಕಿ, ಮರು ಟೆಂಡರ್ ಕರೆಯುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿರ್ದೇಶಿಸಿದರು. ಅರಸನ ಕೆರೆ ಹಾಗೂ ಮಲ್ಲಾಪುರ ಕೆರೆಗೆ ನೇರವಾಗಿ ಚರಂಡಿ ನೀರು ಸೇರದಂತೆ, ವೆಟ್‌ವೆಲ್‌ಗಳ ಕಾರ್ಯಾಚರಣೆ ಆರಂಭಿಸಿ, ಕೊಳಚೆ ನೀರು ಶುದ್ದೀಕರಣ ಘಟಕದಿಂದ ಚರಂಡಿ ನೀರು ಸಂಸ್ಕರಿಸಿಲು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಗಾಂಧಿ ವೃತ್ತ ಸೌಂದರ್ಯೀಕರಣಕ್ಕೆ ಯೋಜನೆ:

ನಗರದ ಗಾಂಧೀ ವೃತ್ತದಲ್ಲಿನ ಒತ್ತುವರಿ ತೆರವುಗೊಳಿಸಿ, ಸುಸಜ್ಜಿತ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಹಾಗೂ ಆಕರ್ಷಕ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿ, ವೃತ್ತ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಂತೆ ಹೊಂಡದ ಬಳಿಯ ಮಾರ್ಕೆಟ್, ಬೀದಿ ಬದಿ ವ್ಯಾಪಾರಿಗಳಿಗೆ ಹಾಕರ್ ಜೋನ್‌ಗಳ ನಿರ್ಮಾಣ, ಪೌಡ್ ಕೋರ್ಟ್, ಹೊಸ ಮಟನ್ ಮಾರುಕಟ್ಟೆ ನಿರ್ಮಾಣ, ಹಳೆ ಬಸ್ ನಿಲ್ದಾಣದ ಬಳಿಯ ಕಟ್ಟೆ ಮಾರುಕಟ್ಟೆಗೆ ಬೀದಿ ಬದಿ ವ್ಯಾಪಾರಗಳ ಸ್ಥಳಾಂತರ ಕುರಿತು ಚರ್ಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಡತ್ವದ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ:ಸಿಎಂ
ಮಹಿಳಾ ಧ್ವನಿಗೆ ಶಕ್ತಿ ನೀಡುವ ಸಮಯ