ಗಂಡು-ಹೆಣ್ಣಿನ ಅಸಮಾನತೆ ಕೊನೆಗಾಣಲಿ

KannadaprabhaNewsNetwork | Published : Mar 22, 2025 2:04 AM

ಸಾರಾಂಶ

ಗಂಡು-ಹೆಣ್ಣಿನ ನಡುವಿನ ಅಸಮಾನತೆ ಕೊನೆಗಾಣಬೇಕು. ಆಗ ಮಾತ್ರ ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ

ಬಳ್ಳಾರಿ:ಮಠ-ಮಾನ್ಯಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿವೆ. ಮಹಿಳೆಯರನ್ನು ಕೀಳಾಗಿ ನೋಡು ಸಂಸ್ಕೃತಿ ಸಮಾಜದಲ್ಲಿ ಎಲ್ಲ ಕಡೆಗಳಲ್ಲೂ ಬೇರೂರಿದೆ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಪ್ರೊ. ಎ. ಮುರಿಗೆಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿಭವನದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ (ಎಐಡಿವೈಒ) ಸಹಯೋಗದಲ್ಲಿ ಜರುಗಿದ ಯುವಜನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಗಂಡು-ಹೆಣ್ಣಿನ ನಡುವಿನ ಅಸಮಾನತೆ ಕೊನೆಗಾಣಬೇಕು. ಆಗ ಮಾತ್ರ ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ. ಈ ದಿಸೆಯಲ್ಲಿ ಯುವ ಸಮುದಾಯ ಜಾಗ್ರತ ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಈ ಮೂಲಕ ಮಹಿಳಾ ರಕ್ಷಣೆಯ ನೆಲೆಯ ಯೋಚನೆಗಳು ವೃದ್ಧಿಸಿಕೊಳ್ಳಬೇಕು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಇಡೀ ಸಮಾಜವೇ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

‘ಲೈಂಗಿಕ ಅಪರಾಧಗಳು-ಕಾರಣ ಮತ್ತು ಪರಿಹಾರ'' ವಿಷಯ ಕುರಿತು ಮಾತನಾಡಿದ ನಗರದ ಹಿರಿಯ ಮಕ್ಕಳ ವೈದ್ಯ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳು ಬೆಚ್ಚಿಬೀಳಿಸುತ್ತಿವೆ. ವಿಪರ್ಯಾಸ ಎಂದರೆ ದೇಶದ ರಾಜ್ಯಧಾನಿ ದೆಹಲಿಯಲ್ಲಿಯೇ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ಮಹಿಳಾ ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ ಎಂದರಲ್ಲದೆ, ಮಹಿಳಾ ರಕ್ಷಣೆಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುವಂತಾಗಬೇಕು ಎಂದು ಆಶಿಸಿದರು.ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಅವರು "ಇಂದಿನ ಯುವಮನಸ್ಸಿನ ತಲ್ಲಣಗಳು " ವಿಷಯ ಕುರಿತು ಮಾತನಾಡಿದರು. ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎ. ಪಂಪಾಪತಿ ಕೋಳೂರು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನೆಯ ಜಿಲ್ಲಾ ಪ್ರಮುಖರಾದ ಸಿದ್ದು, ಪ್ರಮೋದ್, ಅರುಣ್ ಭಗತ್, ಯಲ್ಲಪ್ಪ ಮತ್ತು ವಿವಿಧ ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿ-ಯುವಕರು, ಉಪನ್ಯಾಸಕರು ಹಾಗೂ ನಗರದ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article