ಪ್ರಬುದ್ಧ ಕಲಾಕೃತಿ ರಚನೆಗೆ ಸಹನಾ ಶಕ್ತಿಯೇ ಸಂಪತ್ತು

KannadaprabhaNewsNetwork |  
Published : May 03, 2024, 01:11 AM IST
ಗದಗ ನಗರದ ಶ್ರೀ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ವಿಶ್ವಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಕಲೇಗಾರ ಮಾತನಾಡಿದರು. | Kannada Prabha

ಸಾರಾಂಶ

ಕಲೆ ಎಂಬದು ಸರ್ವರಲ್ಲಿ ನೆಲೆಸಿರುವುದಿಲ್ಲ. ವಿಶೇಷ ಸೃಜಶೀಲತೆಯನ್ನು ರೂಢಿಸಿಕೊಂಡು ಕಲಾವಿದರಾಗಿ ಬೆಳೆದವರಿಗೆ ಮಾತ್ರ ಕಲೆ ಲಭಿಸುತ್ತದೆ

ಗದಗ: ಪ್ರಬುದ್ಧ ಕಲಾಕೃತಿ ರಚನೆಗೆ ಅಪಾಹವಾದ ಸಹನಾ ಶಕ್ತಿ ಬೇಕು ಎಂದು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ ಹೇಳಿದರು.ನಗರದ ಶ್ರೀ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೃಶ್ಯ ಕಲಾವಿದರ ಸಂಘದ ಸಹಯೋಗದಲ್ಲಿ ವಿಶ್ವಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾವ್ಯ -ಕುಂಚ -ಗಾಯನ, ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರು ಇಂದು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ವೇಗವಾಗಿ ಬೆಳೆಯುವ ಆತುರದಲ್ಲಿ ಪ್ರಬುದ್ಧ ಕಲಾಕೃತಿ ರಚನೆ ಸಾಧ್ಯವಿಲ್ಲ. ಇದರಿಂದ ಕಲಾ ಕ್ಷೇತ್ರದ ಬೆಳವಣಿಗೆ ಆಗಲು ಸಾಧ್ಯವಿಲ್ಲ. ಅಪಾರ ಶ್ರಮ ಶ್ರದ್ಧೆಯಿಂದ ಲಿಯೋನಾರ್ಡ್‌ ಜಗತ್ಪ್ರಸಿದ್ಧ ಕಲೆ ರಚಿಸಿದ್ದಾರೆ. ಅಂತಹ ಕಲೆಗಳನ್ನು ರಚನೆ ಮಾಡಲು ವಿಂಚಿ ಅವರಂತಹ ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಕಲಾಕೃತಿಯಲ್ಲಿ ನಿರತರಾಗಬೇಕು ಎಂದು ಹೇಳಿದರು.

ಕಲಾವಿದ ಲಿಯೋನಾರ್ಡ್‌ ಡಾ ವಿಂಚಿ ಬಹುಮುಖ ಪ್ರತಿಭೆಯ ಮಹಾ ಸಾಧಕ. ತಮ್ಮ ಜೀವನವನ್ನೇ ಕಲೆಗಾಗಿ ಮೀಸಲಿಟ್ಟವರು. ಲಲಿತ ಕಲೆಗಳಲ್ಲಿ ಪರಿಣತರಾದವರು. ಇಟಾಲಿ ದೇಶದ ಲಿಯೋನಾರ್ಡ್‌ ಶಿಲ್ಪ, ಚಿತ್ರ, ವಾಸ್ತು, ಸಂಗೀತ ಕಲೆಗಳಲ್ಲಿ ಪ್ರಬುದ್ಧತೆ ಹೊಂದಿದ ಮಹಾ ಶಕ್ತಿ ಸಾಧಕ ಎಂದು ಹೇಳಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ ಮಾತನಾಡಿ, ಕಲೆ ಎಂಬದು ಸರ್ವರಲ್ಲಿ ನೆಲೆಸಿರುವುದಿಲ್ಲ. ವಿಶೇಷ ಸೃಜಶೀಲತೆಯನ್ನು ರೂಢಿಸಿಕೊಂಡು ಕಲಾವಿದರಾಗಿ ಬೆಳೆದವರಿಗೆ ಮಾತ್ರ ಕಲೆ ಲಭಿಸುತ್ತದೆ ಮತ್ತು ಪ್ರಬುದ್ಧತೆ ಬೆಳೆಯುತ್ತದೆ ಎಂದರು.

ಪ್ರೊ. ಅನ್ನದಾನಿ ಹಿರೇಮಠ ಮಾತನಾಡಿ, ಗದಗ ಚಿತ್ರಕಲಾ ಕ್ಷೇತ್ರದಲ್ಲಿ ಅದ್ವಿತೀಯ ಕಾರ್ಯ ಮಾಡಿದೆ. ಮುರಿಗೆಪ್ಪ ಚಟ್ಟಿ ಅವರನ್ನು ಆಧುನಿಕ ರವಿವರ್ಮ ಎಂದೇ ಕರೆಯಲಾಗುತ್ತಿದೆ. ಕಲೆಗೆ ಬೆಲೆ ಕಟ್ಟಲಾಗದು. ಬದಲಾದ ಪರಿಸ್ಥಿತಿಯಲ್ಲಿ ಕಲಾವಿದರು ಆಧುನಿಕ ಸ್ಪರ್ಶವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯ ಬೆಳವಣಿಗೆಗೆ ಕಲೆಯ ಪೋಷಣೆ ಅಗತ್ಯವಾಗಿದೆ. ಕಲಾವಿದರು ಏಕಾಗ್ರತೆಯಿಂದ ರಚಿಸಿದ ಒಂದೊಂದು ಕಲಾಕೃತಿಯೂ ಅಮೂಲ್ಯ ರತ್ನ ಎಂದರು.

ಕಾವ್ಯ, ಕುಂಚ, ಗಾಯನದಲ್ಲಿ ಕಲಾವಿದರಾದ ನಜೀರಹ್ಮದ ಡಂಬಳ, ಪ್ರೊ. ಬಿ.ಸಿ. ಕುತ್ನಿ, ಪ್ರೊ. ಬಸವರಾಜ ನೆಲಜೇರಿ, ಶಿವರಾಜ ಕಮ್ಮಾರ, ಕೆ.ಬಿ. ಬಡಿಗೇರ ಚಿತ್ರ ರಚಿಸಿದರು. ಎ.ಎಸ್. ಮಕಾಂದಾರ, ಮರುಳಸಿದ್ದಪ್ಪ ದೊಡ್ಡಮನಿ, ಶಾರದಾ ಬಾಣದ, ಅಕ್ಕಮಹಾದೇವಿ ಕವತ, ಡಾ. ವಿನಾಯಕ ಕಮತದ ಕಾವ್ಯ ವಾಚನ ಮಾಡಿದರು. ಸವಿತಾ ಗುಡ್ಡದ ಅವರ ರಾಗ ಸಂಯೋಜನೆಯ ಉತ್ತಮ ಗೀತೆಗಳು ಜನ ಮನ ಸೆಳೆದವು. ಎಸ್.ಎಸ್‌. ಚಿಕ್ಕಮಠ, ಸಂಜಯ ತೆಂಬದಮನಿ ವಾದ್ಯ ಸಹಕಾರ ನೀಡಿದರು.

ಕಲಾ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಕಲಾವಿದರನ್ನು ಸನ್ಮಾನಿಸಲಾಯಿತು. ಕಲಾ ಪ್ರದರ್ಶನದಲ್ಲಿ ಉತ್ತಮ ಕಲಾಕೃತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಅಶೋಕ ಅಕ್ಕಿ ನೀಡಿದರು. ದೃಶ್ಯ ಕಲಾವಿದರ ಸಂಘದ ಅಧ್ಯಕ್ಷ ಡಾ. ಬಿ.ಎಲ್. ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಕಲಾವಿದರಾಗಿದ್ದ ಪ್ರಭು ಹಂದಿಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಜಿ.ಬಿ. ಪಾಟೀಲ, ಕೆ.ಎಚ್. ಬೇಲೂರ , ಸಿ.ಕೆ.ಎಚ್. ಕಡಣಿಶಾಸ್ತ್ರಿ, ಕೆ.ಎಸ್. ಬಂಡಿ, ಮಹೇಂದ್ರ ಪಾಲರೇಶ, ಪಿ.ಬಿ. ಬಂಡಿ, ಶ್ರೀಕಾಂತ ಬಡ್ಡೂರ, ರಿಯಾಜ್, ಬಸವರಾಜ ಗೌಡರ, ಅಮರೇಶ ರಾಂಪುರ ಇದ್ದರು. ಷಹಜಹಾನ್ ಮುದಕವಿ ಸ್ವಾಗತಿಸಿದರು. ಪ್ರೊ. ಬಸವರಾಜ ನೆಲಜೇರಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ವಂದಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ